ಆದಿಪುರುಷ್ ಸಿನಿಮಾದ ವಿರುದ್ಧ ಆಕ್ರೋಶ ದಿನೇ-ದಿನೇ ಹೆಚ್ಚಾಗುತ್ತಿದೆ. ಸಿನಿಮಾದ ಕಳಪೆ ವಿಎಫ್ಎಕ್ಸ್, ಪಾತ್ರಗಳ ವಸ್ತ್ರವಿನ್ಯಾಸ, ಪಾತ್ರಗಳ ವ್ಯಕ್ತಿತ್ವ, ಕೇಶವಿನ್ಯಾಸ ಇನ್ನೂ ಹಲವುಗಳ ಬಗೆಗೆ ಟೀಕೆ ವ್ಯಕ್ತವಾಗಿದೆ. ಇದರ ಜೊತೆಗೆ ಸಿನಿಮಾದ ಸಂಭಾಷಣೆ ಕುರಿತಂತೆಯೂ ಹಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದು, ಕೀಳು ಅಭಿರುಚಿಯ ಸಂಭಾಷಣೆಯನ್ನು ಸಿನಿಮಾದಲ್ಲಿ ಬಳಸಲಾಗಿದೆ ಎಂದಿದ್ದಾರೆ.
ಇದೀಗ ಚಿತ್ರತಂಡವು ಕೆಲವು ಸಂಭಾಷಣೆಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.
ಸಿನಿಮಾಕ್ಕೆ ಚಿತ್ರಕತೆ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿರುವ ಮನೋಜ್ ಮುಂತಶೀರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆದಿಪುರುಷ್ ಸಿನಿಮಾಕ್ಕೆ ಸುಮಾರು ನಾಲ್ಕು ಸಾವಿರ ಸಾಲುಗಳನ್ನು ನಾನು ಬರೆದಿದ್ದೇನೆ. ಅವುಗಳಲ್ಲಿ ಒಂದೈದು ಸಾಲುಗಳಿಂದ ಕೆಲವರ ಭಾವನೆಗೆ ಧಕ್ಕೆ ಆಗಿರಬಹುದು. ಆದರೆ ಉಳಿದ ಸಾಲುಗಳಲ್ಲಿ ನಾನು ಪ್ರಭು ಶ್ರೀರಾಮನನ್ನು ವೈಭವೀಕರಿಸಿದ್ದೇನೆ, ಸೀತಾಮಾತೆಯನ್ನು ಆರಾಧಿಸಿದ್ದೇನೆ ಅದಕ್ಕೆ ನನಗೆ ಗೌರವ ಸಿಗಬಹುದು ಎಂದುಕೊಂಡಿದ್ದೆ ಆದರೆ ಸಿಗಲಿಲ್ಲ’ ಎಂದಿದ್ದಾರೆ.
“ನಿಮ್ಮ ಅಭಿಪ್ರಾಯ, ಮನ್ನಣೆಗಿಂತಲೂ ಮಿಗಿಲಾದದ್ದು ಯಾವುದೂ ಇಲ್ಲ ಹಾಗಾಗಿ ಈ ಪೋಸ್ಟ್ ಹಂಚಿಕೊಂಡಿದ್ದೇನೆ. ಈಗ ಆಕ್ಷೇಪಣೆ ಎತ್ತಿರುವ ಸಂಭಾಷಣೆಗಳ ಪರವಾಗಿ ನಾನು ವಾದ ಮಂಡಿಸಬಲ್ಲೆ. ಆದರೆ ಬೇಡ, ಅದು ನಿಮ್ಮ ಬೇಸರವನ್ನು ಕಡಿಮೆ ಮಾಡಲಾರದೇನೋ. ಯಾವ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಇದೆಯೋ ಆ ಸಂಭಾಷಣೆಗಳನ್ನು ಬದಲಾಯಿಸಲು ನಾನೂ, ನಮ್ಮ ನಿರ್ಮಾಪಕ-ನಿರ್ದೇಶಕರು ನಿರ್ಧರಿಸಿದ್ದೇವೆ. ಆ ಸಂಭಾಷಣೆಗಳು ಈ ವಾರದ ಬಳಿಕ ಸಿನಿಮಾಕ್ಕೆ ಸೇರಿಸುತ್ತೇವೆ” ಎಂದಿದ್ದಾರೆ.