Home ಕರಾವಳಿ ಮಂಗಳೂರು ಏರ್ ಪೋರ್ಟ್ ಗೆ ಹೆಚ್ಚುವರಿ ಭೂಸ್ವಾದೀನಕ್ಕೆ ತುರ್ತು ಕ್ರಮ ಜರುಗಿಸಲು ಆಗ್ರಹ

ಮಂಗಳೂರು ಏರ್ ಪೋರ್ಟ್ ಗೆ ಹೆಚ್ಚುವರಿ ಭೂಸ್ವಾದೀನಕ್ಕೆ ತುರ್ತು ಕ್ರಮ ಜರುಗಿಸಲು ಆಗ್ರಹ

0

ನವದೆಹಲಿ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚುವರಿ ಭೂಸ್ವಾಧೀನಕ್ಕೆ ಎದುರಾಗಿರುವ ಅಡೆತಡೆಗಳ ನಿವಾರಿಸುವುದಕ್ಕೆ ವಿಮಾನಯಾನ ಸಚಿವಾಲಯ ವಿಶೇಷ ಮುತುವರ್ಜಿ ವಹಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಕ್ಯಾ. ಚೌಟ, “ಮಂಗಳೂರು ಏರ್‌ಪೋರ್ಟ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯು ನೋಡಿಕೊಳ್ಳುತ್ತಿದ್ದು, ನಿಲ್ದಾಣದ ರನ್‌ವೇ ಸುರಕ್ಷತೆ ಸಂಬಂಧಿಸಂತೆ ಹೆಚ್ಚುವರಿ ಭೂಮಿಯ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತವನ್ನು ಕೇಳಿಕೊಂಡಿದೆ. ಅದರಂತೆ ರಾಜ್ಯ ಸರ್ಕಾರ ಮೂಲಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(AAI)ಕ್ಕೂ ಪತ್ರ ಬರೆದ್ದು, ಆ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡುವುದಕ್ಕೂ ಸಿದ್ಧವಿರುವುದಾಗಿ ಹೇಳಿಕೊಂಡಿದೆ. ಈ ಹಿನ್ನಲೆಯಲ್ಲಿ ನಾನು ಖುದ್ದು ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿಯಾಗಿದ್ದು ಅವರು ಕೂಡ ಇದಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆದರೆ, ಈ ಪ್ರಕ್ರಿಯೆಯು ಇದೀಗ ಅಲ್ಲಿಗೇ ನಿಂತಿದ್ದು, ಮುಂದಿನ ಹಂತಕ್ಕೆ ಯಾವುದೇ ರೀತಿಯ ಬೆಳವಣಿಗೆಗಳು ಆಗಿಲ್ಲ. ರಾಜ್ಯ ಸರ್ಕಾರ ಸೇರಿದಂತೆ ಎಲ್ಲ ಏಜೆನ್ಸಿಗಳು ರನ್‌ವೇ ವಿಸ್ತರಣೆಗೆ ಬೇಕಾಗುವ ಭೂಸ್ವಾಧೀನ ವಿಚಾರದ ಬಗ್ಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದರೂ ಅದನ್ನು ಕಾರ್ಯಗತಗೊಳಿಸುವಲ್ಲಿ ಯಾವುದೇ ಕ್ರಮ ಆಗಿಲ್ಲ. ಮುಖ್ಯ ಸಮಸ್ಯೆ ಅಂದರೆ, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೆ ಆಗಲಿ ಅಥವಾ ಏರ್ ಪೋರ್ಟ್ ಆಗಲಿ ನಿರ್ವಹಣೆ ನೋಡಿಕೊಳ್ಳುತ್ತಿರುವ ಖಾಸಗಿ ಸಂಸ್ಥೆಗೆ ಮುಂದಿನ ಕಾರ್ಯ ಯೋಜನೆಗೆ ಬಗ್ಗೆ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂದು ಕ್ಯಾ. ಚೌಟ ಅವರು ಸದನದ ಗಮನಸೆಳೆದರು.

ನಿಲ್ದಾಣದ ಸಮಗ್ರ ಅಭಿವೃದ್ದಿ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ರನ್‌ವೇಗೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ಸಂಸದರು, ಈ ವಿಚಾರದಲ್ಲಿ ಆಡಳಿತಾತ್ಮಕವಾದ ವಿಳಂಬ ನೀತಿಯಿಂದಾಗಿ ಮಂಗಳೂರು ವಿಮಾನ ನಿಲ್ದಾಣದ ಸುರಕ್ಷತೆ, ರನ್‌ವೇ ವಿಸ್ತರಣೆ ಯೋಜನೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಿರುವಾಗ, ಏರ್‌ಪೋರ್ಟ್ ಗೆ ಹೆಚ್ಚುವರಿ ಭೂಮಿ ಒದಗಿಸುವ ಏಜೆನ್ಸಿಗಳ ಜತೆಗೆ ಸಮಾಲೋಚನೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಅವರು ಸದನದಲ್ಲಿ ಆಗ್ರಹಿಸಿದ್ದಾರೆ.

ಈ ಕುರಿತು ಬಳಿಕ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ, ಹೆಚ್ಚುವರಿ ಭೂಮಿ ಸ್ವಾಧೀನಪಡಿಸುವುದರಿಂದ ಮಂಗಳೂರು ವಿಮಾನ ನಿಲ್ದಾಣದ ಸಮಗ್ರ ಅಭಿವೃದ್ಧಿಯಾಗಲಿದೆ. ಈಗಾಗಲೇ ವಾಣಿಜ್ಯ ನಗರಿಯಾಗಿ ಬೆಳವಣಿಗೆ ಸಾಧಿಸುತ್ತಿರುವ ಮಂಗಳೂರಿನ ಈ ಏರ್‌ಪೋರ್ಟ್ ನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ಕರಾವಳಿ ಭಾಗದ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕಗಳಿಗೂ ಮತ್ತಷ್ಟು ಉತ್ತೇಜನ ದೊರೆಯಲಿದೆ. ಜತೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಮತ್ತಷ್ಟು ದೇಶ-ವಿದೇಶದ ನಗರಗಳಿಗೆ ಹೆಚ್ಚಿನ ವಿಮಾನಗಳ ಹಾರಾಟ ಸೇವೆ ಪ್ರಾರಂಭಿಸುವುದಕ್ಕೂ ಅನುಕೂಲವಾಗಲಿದೆ. ಹೀಗಾಗಿ, ಮಂಗಳೂರು ಏರ್‌ಪೋರ್ಟ್ ಗೆ ಹೆಚ್ಚುವರಿ ಭೂಮಿ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಏಜೆನ್ಸಿಗಳು ಜರೂರಾಗಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ.

LEAVE A REPLY

Please enter your comment!
Please enter your name here