Home ಕರಾವಳಿ ಕಡಬ: ಯುವಕನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್…!! ಸ್ನೇಹಿತನೇ ಹತ್ಯೆಗೈದು ಮೃತದೇಹ ಸುಡಲು ಯತ್ನ

ಕಡಬ: ಯುವಕನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್…!! ಸ್ನೇಹಿತನೇ ಹತ್ಯೆಗೈದು ಮೃತದೇಹ ಸುಡಲು ಯತ್ನ

0

ಕಡಬ: ಐದಾರು ದಿನಗಳಿಂದ ನಾಪತ್ತೆಯಾಗಿ ಹುಡುಕಾಟದ ಬಳಿಕ ಮೃತದೇಹವಾಗಿ ಪತ್ತೆಯಾದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಸಂದೀಪ್ ಗೌಡ (29) ಎಂಬ ಯುವಕನನ್ನು ಆತನ ಸ್ನೇಹಿತನೇ ಕೊಲೆಗೈದು ಸುಟ್ಟು ಹಾಕಲು ಯತ್ನಿಸಿದ್ದಾನೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಸುಮಾರು ಒಂದೂವರೆ ಕಿ.ಮೀ. ದೂರದ ನಾರಡ್ಕ ಎಂಬಲ್ಲಿನ ಕಾಡಿನಲ್ಲಿ ಸಂದೀಪ್ ಗೌಡ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಸಂದೀಪ್‌ನನ್ನು ಆತನ ಸ್ನೇಹಿತ ನೆಟ್ಟಣ ನಿವಾಸಿ ಪ್ರತೀಕ್ ನೆಟ್ಟಣ ಎಂಬಾತ ರೈಲು ನಿಲ್ದಾಣದ ಬಳಿಯ ಗುಡ್ಡೆಯಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದಿದ್ದಾನೆ.

ಬಳಿಕ ಆತನ ಮೃತದೇಹವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟುಹಾಕಲು ಯತ್ನಿಸಿರುವುದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಮರ್ದಾಳದಲ್ಲಿ ವಿನಯ್ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದ ಸಂದೀಪ್ ನ. 27ರಂದು ಕೆಲಸಕ್ಕೆಂದು ಮನೆಯಿಂದ ತೆರಳಿ ಸಂಜೆ ಮನೆಗೆ ವಾಪಸಾಗಿರಲಿಲ್ಲ. ಈ ಬಗ್ಗೆ ವಿನಯ್‌ರಲ್ಲಿ ಸಂದೀಪ್ ತಾಯಿ ವಿಚಾರಿಸಿದ್ದಾರೆ. ಆಗ ಸಂದೀಪ್ ಸ್ನೇಹಿತ ಪ್ರತೀಕ್‌ನೊಂದಿಗೆ ಆತನ ಕಾರಿನಲ್ಲಿ ಹೋಗಿರುವುದಾಗಿ ತಿಳಿದು ಬಂದಿದೆ.

ಆ ಬಳಿಕ ಹುಡುಕಾಡಿದರೂ ಸಂದೀಪ್ ಪತ್ತೆಯಾಗಲಿಲ್ಲ. ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಸಂದೀಪ್‌ನನ್ನು ಕಾರಿನಲ್ಲಿ ಕರೆದೊಯ್ದಿದ್ದ ಪ್ರತೀಕ್ ಹಾಗೂ ಇನ್ನೋರ್ವನನ್ನು ಪೊಲೀಸರು ರವಿವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಕೊಲೆಗೆ ಸ್ಪಷ್ಟ ಕಾರಣ ಪೊಲೀಸ್‌ ತನಿಖೆಯಿಂದ ತಿಳಿದು ಬರಬೇಕಿದೆ. ಕೊಲೆಗೀಡಾದ ಸಂದೀಪ್‌ನ ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿದ್ದ ಸ್ಥಳಕ್ಕೆ ಸೋಮವಾರ ಸಂಜೆ ಆರೋಪಿ ಪ್ರತೀಕ್‌ನನ್ನು ಪೊಲೀಸರು ಕರೆ ತರಲಾಗಿತ್ತು. ಈ ವೇಳೆ ಆರೋಪಿಯನ್ನು ನಮ್ಮ ವಶಕ್ಕೆ ನೀಡಿ ಎಂದು ಸ್ಥಳೀಯರು ಪೊಲೀಸ್ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ಕೃತ್ಯ ಒಂದಿಬ್ಬರು ಮಾಡಿದ್ದಲ್ಲ. ಉಳಿದವರನ್ನೂ ತಕ್ಷಣ ಬಂಧಿಸುವಂತೇ ಒತ್ತಾಯ ಕೇಳಿ ಬಂದಿದೆ. ಬಿಳಿನೆಲೆ ಭಾಗದಲ್ಲಿ ಗಾಂಜಾ ಮಾರಾಟ ಸಕ್ರಿಯವಾಗಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣದ ಆರೋಪಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜಕೀಯ ಒತ್ತಡವಿದೆ ಎಂಬ ಆರೋಪವೂ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here