ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆಯುವ ಮೂರನೇ ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೇಸ್ಟಾ 2025 ಜ.15 – 19 ರವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದ ವಿ.ಟಿ.ರಸ್ತೆಯ ಚೇತನಾ ಬಾಲವಿಕಾಸ ಕೇಂದ್ರದಲ್ಲಿ ಮಾತನಾಡಿದ ಅವರು, ಸ್ಟ್ರೀಟ್ ಫುಡ್ ಫಿಯೇಸ್ಟಾ ಮಣ್ಣಗುಡ್ಡ ಗುರ್ಜಿ ಜಂಕ್ಷನ್‌ನಿಂದ ಪ್ರಾರಂಭವಾಗಿ ಉರ್ವ ಕೆನರಾ ಹೈಸ್ಕೂಲ್ ಮುಂಭಾಗದ ರಸ್ತೆಯಾಗಿ ಮನಪಾದವರೆಗೆ, ಮತ್ತೊಂದೆಡೆ ಮಂಗಳಾ ಕ್ರೀಡಾಂಗಣ ಬದಿಯ ರಸ್ತೆಯಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತವಾಗಿ ಪಬ್ಬಾಸ್‌ವರೆಗೆ ಇರಲಿದೆ. 250 ಕ್ಕಿಂತಲೂ ಅಧಿಕ ಆಹಾರ ಮಳಿಗೆಗಳಲ್ಲಿ ಕರಾವಳಿ ತಿಂಡಿ ತಿನಿಸುಗಳು ಸೇರಿದಂತೆ ಗುಜರಾತಿ, ರಾಜಸ್ಥಾನಿ, ಜೈನ, ಕೊಂಕಣಿ, ಕೇರಳ ಹೀಗೆ ವೈವಿಧ್ಯಮಯ ಸಮುದಾಯಗಳ ಆಹಾರ ಪದಾರ್ಥಗಳು ದೊರೆಯಲಿದೆ. ಆಹಾರ ಮಳಿಗೆಗಳು ಪ್ರಾರಂಭದ ಎರಡು ದಿನಗಳು ಸಂಜೆ 4ರಿಂದ ರಾತ್ರಿ 10.30ವರೆಗೆ ಇದ್ದರೆ, ಬಳಿಕದ ಮೂರು ದಿನಗಳು ಮಧ್ಯಾಹ್ನ 2ರಿಂದ ರಾತ್ರಿ 10.30ವರೆಗೆ ಇರಲಿದೆ ಎಂದರು ಈ ಬಾರಿ ವಿಶೇಷವಾಗಿ ವೆಜ್ ಸ್ಟ್ರೀಟ್ ಎಂಬ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಕರಾವಳಿ ಉತ್ಸವ ಮೈದಾನ, ಲೇಡಿ ಹಿಲ್ ಚರ್ಚ್ ಮೈದಾನ, ಮಣ್ಣಗುಡ್ಡ ಪ್ರದೇಶ, ಉರ್ವ ಕೆನರಾ ಹೈಸ್ಕೂಲ್ ಅಂಗಳ, ಮಣ್ಣಗುಡ್ಡ ವಾಲಿಬಾಲ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ಟ್ರೀಟ್ ಫುಡ್ ಫಿಯೇಸ್ಟಾ ನಡೆಯುವ ಸಂದರ್ಭ ಸಂಚಾರ ಅಡಚಣೆಯಾದಲ್ಲಿ ನಾಗರಿಕರು ಸಹಕರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಮನವಿ ಮಾಡಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸ್ಟ್ರೀಟ್ ಫುಡ್ ಫಿಯೇಸ್ಟಾದ ಯಶಸ್ಸನ್ನು ಮನಗಂಡು ಪುತ್ತೂರು, ಸುರತ್ಕಲ್, ಉಡುಪಿಯಲ್ಲೂ ಸ್ಟ್ರೀಟ್‌ಫುಡ್ ಫೆಸ್ಟಿವಲ್ ನಡೆಯುತ್ತಿದೆ. ಸ್ಟ್ರೀಟ್‌ಫುಡ್ ಫಿಯೇಸ್ಟಾದಿಂದ ಮಂಗಳೂರು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದಂತಾಗಿದೆ ಎಂದರು.