ಹೈದರಾಬಾದ್: ವಿಶ್ವವಿಖ್ಯಾತ ತಿರುಪತಿ ದೇಗುಲದ ಲಡ್ಡು ಪ್ರಸಾದ ಕರಬೆರಕೆ ವಿವಾದ ನಂತರ ಬಹಳ ಆಕ್ಟೀವ್ ಆಗಿರುವ ಜನಸೇನಾ ಪಕ್ಷ(Janasena party) ದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ(Andra Pradesh DCM) ಪವನ್ ಕಲ್ಯಾಣ್(Pawan Kalyan) ಅವರು ಸನಾತನ ಧರ್ಮದ ರಕ್ಷಣೆ ಬಗ್ಗೆ ಆಗಾಗ ಧ್ವನಿ ಎತ್ತುತಲೇ ಇದ್ದಾರೆ.
ಅವರು ಇದೀಗ ಸನಾತನ ಧರ್ಮ ರಕ್ಷಣೆಗಾಗಿ ತಮ್ಮ ಪಕ್ಷದ ಹೊಸ ವಿಭಾಗವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ನರಸಿಂಹ ವಾರಾಹಿ ಬ್ರಿಗೇಡ್(Narasimha Varahi Brigade) ಎಂಬ ಪಕ್ಷದ ಹೊಸ ವಿಭಾಗವನ್ನು ಆರಂಭಿಸಿದ್ದಾರೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ, ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ನಾನು ನಮ್ಮ ಪಕ್ಷದಲ್ಲಿ ‘ನರಸಿಂಹ ವಾರಾಹಿ ಎಂಬ ಹೆಸರಿನ ವಿಭಾಗವನ್ನು ಸ್ಥಾಪಿಸುತ್ತಿದ್ದೇನೆ. ಸನಾತನ ಧರ್ಮದ ರಕ್ಷಣೆಗಾಗಿ ಬ್ರಿಗೇಡ್’ ಎಂದು ಕಲ್ಯಾಣ್ ನೂತನ ಬ್ರಿಗೇಡ್ ಉದ್ದೇಶವನ್ನು ವಿವರಿಸಿದರು.
ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಳಕೆಯ ಬಗ್ಗೆ ಇತ್ತೀಚಿನ ಆರೋಪಗಳ ಬೆನ್ನಲ್ಲೇ ಈ ಪ್ರಕಟಣೆ ಹೊರಡಿಸಲಾಗಿದೆ.
ಕಳೆದ ತಿಂಗಳು, ಕಲ್ಯಾಣ್ ಸನಾತನ ಧರ್ಮವನ್ನು ರಕ್ಷಿಸಲು ಮತ್ತು ಅದರ ನಂಬಿಕೆಗಳನ್ನು ಅಗೌರವಿಸುವ ಕ್ರಮಗಳನ್ನು ತಡೆಗಟ್ಟಲು ದೃಢವಾದ ರಾಷ್ಟ್ರೀಯ ಕಾನೂನು ಜಾರಿಯಾಗಬೇಕೆಂದು ಪ್ರತಿಪಾದಿಸಿದ್ದರು. ತಿರುಪತಿಯಲ್ಲಿ ನಡೆದ ವಾರಾಹಿ ಘೋಷಣೆ ಕಾರ್ಯಕ್ರಮದಲ್ಲಿ, ಸನಾತನ ಧರ್ಮವನ್ನು ರಕ್ಷಿಸಲು ಮತ್ತು ಅದರ ನಂಬಿಕೆಗಳಿಗೆ ಧಕ್ಕೆಯಾಗದಂತೆ ಪ್ರಬಲ ರಾಷ್ಟ್ರೀಯ ಕಾಯಿದೆಯ ಅಗತ್ಯವಿದೆ, ಈ ಕಾಯಿದೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಮತ್ತು ಭಾರತದಾದ್ಯಂತ ಏಕರೂಪವಾಗಿ ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಕಾನೂನಿನ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸನಾತನ ಧರ್ಮ ಸಂರಕ್ಷಣಾ ಮಂಡಳಿಯನ್ನು ಸ್ಥಾಪಿಸಲು ಪವನ್ ಕಲ್ಯಾಣ್ ಪ್ರಸ್ತಾಪಿಸಿದರು. ಹೆಚ್ಚುವರಿಯಾಗಿ, ದೇವಾಲಯದ ನೈವೇದ್ಯ ಮತ್ತು ಪ್ರಸಾದಕ್ಕೆ ಬಳಸುವ ಸಾಮಗ್ರಿಗಳಲ್ಲಿ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸನಾತನ ಧರ್ಮ ಪ್ರಮಾಣೀಕರಣದ ಅಗತ್ಯವನ್ನು ಅವರು ಒತ್ತಿ ಹೇಳಿದರು.