Home ತಾಜಾ ಸುದ್ದಿ ತುಳು ಚಿತ್ರರಂಗಕ್ಕೆ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗಣೇಶ್‌ ಎಂಟ್ರಿ: ಪತ್ನಿ ಕನಸಿಗೆ ಸಾಥ್‌ ನೀಡಿದ...

ತುಳು ಚಿತ್ರರಂಗಕ್ಕೆ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗಣೇಶ್‌ ಎಂಟ್ರಿ: ಪತ್ನಿ ಕನಸಿಗೆ ಸಾಥ್‌ ನೀಡಿದ ಗೋಲ್ಡನ್‌ ಸ್ಟಾರ್‌ ಗಣೇಶ್‌

0

ಸ್ಯಾಂಡಲ್‌ವುಡ್‌ ನಟ ಗಣೇಶ್‌ ಪತ್ನಿ ಶಿಲ್ಪಾ ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಶಿಲ್ಪಾ ತಮ್ಮ ಮಾತೃಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಶಿಲ್ಪಾ ಮೂಲತ: ಮಂಗಳೂರಿನ ಬಾರ್ಕೂರಿನವರಾಗಿದ್ದು ಈಗ ತುಳು ಭಾಷೆಯಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪತ್ನಿ ಕನಸಿಗೆ ಗೋಲ್ಡನ್‌ ಸ್ಟಾರ್‌ ಸಾಥ್‌ ನೀಡುತ್ತಿದ್ದಾರೆ.

ಗೋಲ್ಡನ್‌ ಮೂವೀಸ್‌ ಬ್ಯಾನರ್‌ ಅಡಿ ತಯಾರಾಗುತ್ತಿರುವ ಸಿನಿಮಾ

ತಮ್ಮ ಗೋಲ್ಡನ್‌ ಮೂವೀಸ್‌ ಬ್ಯಾನರ್‌ ಮೂಲಕ ಶಿಲ್ಪಾ ಗಣೇಶ್‌, ಪತಿ ಅಭಿನಯಿಸಿರುವ ಮಳೆಯಲಿ ಜೊತೆಯಲಿ, ಗೀತಾ, ಕೂಲ್‌, ಮುಗುಳು ನಗೆ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಬಹಳ ದಿನಗಳಿಂದ ಶಿಲ್ಪಾಗೆ ತನ್ನ ಮಾತೃಭಾಷೆಯಲ್ಲಿ ಒಂದು ಸಿನಿಮಾವನ್ನು ನಿರ್ಮಿಸಬೇಕು ಎಂಬ ಆಸೆ ಇತ್ತು. ಇದೀಗ ಆ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ತುಳು ಚಿತ್ರಕ್ಕೆ ಸಂದೀಪ್‌ ಬೆದ್ರ ಆಕ್ಷನ್‌ ಕಟ್‌ ಹೇಳಲಿದ್ದು ಇದೇ ವರ್ಷ ಡಿಸೆಂಬರ್‌ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಈ ಚಿತ್ರಕ್ಕೆ ಮೋಹನ್‌ ಭಟ್ಕಳ್‌ ಚಿತ್ರಕಥೆ ಬರೆದಿದ್ದು, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ ಇರಲಿದೆ. ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಹರಿಕೃಷ್ಣ ಬಂಟ್ವಾಳ್‌ ಪುತ್ರ ನಿತ್ಯಪ್ರಕಾಶ್‌ ಬಂಟ್ವಾಳ್‌ ನಾಯಕನಾಗಿ ನಟಿಸಲಿದ್ದಾರೆ. ನಾಯಕಿಯಾಗಿ ಹೊಸ ಮುಖವನ್ನು ಪರಿಚಯಿಸುವ ಸಾಧ್ಯತೆ ಇದೆ.

ತುಳು ಸಿನಿಮಾ ನಿರ್ಮಿಸುವುದು ಬಹಳ ದಿನಗಳ ಆಸೆ ಎಂದ ಶಿಲ್ಪಾ

ಮಂಗಳೂರಿನ ಕದ್ರಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ತುಳುವಿನಲ್ಲಿ ಸಿನಿಮಾ ಮಾಡಬೇಕು ಎಂದು ಗಣೇಶ್‌ ಹೇಳಿದ್ದರು. ಇದೀಗ ಪತಿಯ ಮಾತಿನಂತೆ ಶಿಲ್ಪಾ ಕೂಡಾ ತಮ್ಮ ಕನಸಿಗೆ ನೀರೆರೆಯಲು ಹೊರಟಿದ್ದಾರೆ. ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಶಿಲ್ಪಾ ಗಣೇಶ್‌, ನನ್ನ ಮಾತೃಭಾಷೆಯಲ್ಲಿಸ ಸಿನಿಮಾ ನಿರ್ಮಾಣ ಮಾಡಲು ಅವಕಾಶ ದೊರೆತಿರುವುದು ಖುಷಿಯ ವಿಚಾರ, ಕರಾವಳಿ ನನ್ನ ತವರೂರು. ತುಳು ಸಿನಿಮಾವೊಂದನ್ನು ನಿರ್ಮಿಸಬೇಕು ಎನ್ನುವುದು ಗಣೇಶ್‌ ಹಾಗೂ ನನ್ನ ಬಹಳ ದಿನಗಳ ಆಸೆಯಾಗಿತ್ತು. ಈಗ ಸಮಯ ಒದಗಿ ಬಂದಿದೆ. ಶೀಘ್ರದಲ್ಲೇ ಶೂಟಿಂಗ್‌ ಆರಂಭವಾಗಲಿದೆ ಎಂದರು.

ಸಂದೀಪ್‌ ಬೆದ್ರಾ ನಿರ್ದೇಶನ ತುಳು ಚಿತ್ರ

ನಿರ್ದೇಶಕ ಸಂದೀಪ್‌ ಬೆದ್ರ ಮಾತನಾಡಿ, ಶಿಲ್ಪಾ ಗಣೇಶ್‌ ತುಳುವಿನಲ್ಲಿ ಸಿನಿಮಾ ನಿರ್ಮಿಸುತ್ತಿರುವುದು ಖುಷಿಯ ವಿಚಾರ. ಈ ಸಿನಿಮಾವನ್ನು ನಿರ್ದೇಶನ ಮಾಡುವ ಅವಕಾಶ ನನಗೆ ದೊರೆತಿರುವುದು ನಿಜಕ್ಕೂ ನನ್ನ ಅದೃಷ್ಟ. ಸಿನಿಮಾ ಚಿತ್ರಕಥೆ ತಯಾರಾಗಿದೆ. ಇದೊಂದು ಕೌಟುಂಬಿಕ, ಹಾಸ್ಯಭರಿತ ಸಿನಿಮಾ. ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಚಿತ್ರೀಕರಣ ನಡೆಯಲಿದೆ. ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ ಎಂದಿದ್ದಾರೆ.

 

LEAVE A REPLY

Please enter your comment!
Please enter your name here