Home ಕರಾವಳಿ ಪುತ್ತೂರು:ಬೆಂಗಳೂರು ಕಂಬಳದ ವಿರುದ್ಧ ಪೆಟಾ’ದಿಂದ ಹೈಕೋರ್ಟ್‌ನಲ್ಲಿ ರಿಟ್, ವೈಯಕ್ತಿಕ ನೆಲೆಯಲ್ಲಿ ಕಾನೂನು ಹೋರಾಟ-ಅಶೋಕ್ ರೈ

ಪುತ್ತೂರು:ಬೆಂಗಳೂರು ಕಂಬಳದ ವಿರುದ್ಧ ಪೆಟಾ’ದಿಂದ ಹೈಕೋರ್ಟ್‌ನಲ್ಲಿ ರಿಟ್, ವೈಯಕ್ತಿಕ ನೆಲೆಯಲ್ಲಿ ಕಾನೂನು ಹೋರಾಟ-ಅಶೋಕ್ ರೈ

0

ಪುತ್ತೂರು: ಬೆಂಗಳೂರಿನಲ್ಲಿ ಕಂಬಳ ನಡೆಸಲು ಅವಕಾಶ ನೀಡಬಾರದು ಎಂದು ಕೋರಿ ಪೆಟಾ ಸಂಸ್ಥೆಯ ವತಿಯಿಂದ ರಾಜ್ಯ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲಾಗಿದ್ದು, ಇದರ ವಿರುದ್ದ ನಾನು ವೈಯಕ್ತಿಕ ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಲಿದ್ದೇನೆ ಎಂದು ಪುತ್ತೂರು ಕ್ಷೇತ್ರದ ಶಾಸಕ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಂಬಳದ ರೂವಾರಿ ಅಶೋಕ್ ರೈ ಹೇಳಿದ್ದಾರೆ. ಮಂಗಳವಾರ ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದು ಗಮನಕ್ಕೆ ಬಂದಿದೆ. ಪೆಟಾ ರಿಟ್ ಸಲ್ಲಿಕೆ ಬೆನ್ನಲ್ಲೇ ನನ್ನ ವೈಯಕ್ತಿಕ ನೆಲೆಯಲ್ಲಿ ವಕೀಲರ ಮೂಲಕ ರಿಟ್ ಪಿಟಿಶನ್ ಹಾಕಿದ್ದೇನೆ. ಇದರಲ್ಲಿ ನನ್ನನ್ನೂ ಒಂದು ಪಾರ್ಟಿ ಮಾಡಬೇಕೆಂದು ಕೋರಿದ್ದೇನೆ. ಸರಕಾರಿ ವಕೀಲರಿಗೆ ನ್ಯಾಯಾಂಗ ಹೋರಾಟದಲ್ಲಿ ನೆರವಾಗಲು ನಾನು ವಕೀಲರನ್ನು ನೇಮಿಸಿ ವಾದ ಮಂಡಿಸಲಿದ್ದೇನೆ ಎಂದರು. ಬೆಂಗಳೂರಿಗೆ ಕಂಬಳ ಕೋಣಗಳನ್ನು ಕೊಂಡೊಯ್ಯುವಾಗ ಹೊಡೆಯಲಾಗುತ್ತದೆ. ವಾಹನಗಳಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಕೋಣಗಳಿಗೆ ಹಿಂಸೆ ಉಂಟು ಮಾಡಲಾಗುತ್ತದೆ. ಆದ್ದರಿಂದ ಬೆಂಗಳೂರು ಕಂಬಳಕ್ಕೆ ಅವಕಾಶ ನೀಡಬಾರದು ಎಂದು ಪೆಟಾದವರು ಕೋರಿದ್ದಾರೆ. ಹಿಂದೆ ಕಂಬಳದ ಪರ ಸರಕಾರ ಸುಗ್ರಿವಾಜ್ಞೆ ಹೊರಡಿಸುವ ಸಂದರ್ಭ ಸಲ್ಲಿಸಲಾದ ಅಫಿದವಿತ್‌ ನಲ್ಲಿ ಕಂಬಳವನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ ಎಂದು ಬರೆಯಲಾಗಿತ್ತು. ಇದೇ ಅಂಶವನ್ನು ಇಟ್ಟುಕೊಂಡು ಪೆಟಾದವರು ದ.ಕ., ಉಡುಪಿ ಹೊರತು ಬೇರೆ ಕಡೆ ಅವಕಾಶ ನೀಡಬಾರದು ಎಂದು ವಾದಿಸಿದ್ದಾರೆ. ದ.ಕ., ಉಡುಪಿಗಳಲ್ಲಿ ಕಂಬಳ ನಡೆಸಲಾಗುತ್ತಿದೆ ಎಂದು ಅಫಿದಾವಿತ್‌ ನಲ್ಲಿ ತಿಳಿಸಿದ್ದು ನಿಜ. ಹಾಗೆಂದು ಬೇರೆಲ್ಲೂ ಕಂಬಳ ನಡೆಸುವುದಿಲ್ಲ ಎಂದು ತಿಳಿಸಿಲ್ಲ. ಹೀಗಾಗಿ ಪೆಟಾದವರ ವಾದದ ಮುಂದೆ ನಾವು ಜಯ ಗಳಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು. ಕಂಬಳದ ಪರ ಸುಗ್ರಿವಾಜ್ಞೆ ಹೊರಡಿಸಿದ್ದು, ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಕಂಬಳದ ಪರ ತೀರ್ಪು ನೀಡಿದ್ದೆಲ್ಲ ಚಾರಿತ್ರಿಕ ವಿದ್ಯಮಾನ. ಇದಕ್ಕಿಂತ ಮಿಗಿಲಾದ ತೀರ್ಪು ಯಾವುದೂ ಇಲ್ಲ, ಇಡೀ ದೇಶದಲ್ಲಿ ಈ ಮಾದರಿಯ ತೀರ್ಪು ಕಂಬಳಕ್ಕೆ ಬಿಟ್ಟರೆ ಬೇರಾದ ಜನಪದ ಕ್ರೀಡೆಗೂ ಬಂದಿಲ್ಲ. ಹೀಗಿರುವಾಗ ಕಂಬಳದ ವಿಚಾರದಲ್ಲಿ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು. ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ನಡೆಸಿದ್ದೇವೆ. ಅಲ್ಲಿ ಕಂಬಳ ನಡೆಸುವುದು ಕಷ್ಟ ನಿಜ. ಪೊಲೀಸ್ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಭಾರೀ ಮುಂಜಾಗರೂಕತೆ ಬೇಕು. ಈ ಬಾರಿಯೂ ದಿನ ನಿಗದಿ ಮಾಡಿ ಕಂಬಳ ನಡೆಸಲು ಆಸಕ್ತರಿರುವವರು ಮುಂದೆ ಬರಲಿ ಎಂದು ಕಾಯುತ್ತಿದ್ದೇವೆ ಎಂದರು.


LEAVE A REPLY

Please enter your comment!
Please enter your name here