ಮಂಗಳೂರು: ಕರಾವಳಿಯಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೇಲ್ಪಂಕ್ತಿಯಲ್ಲಿದ್ದ ಕುಣಿತ ಭಜನೆಗೆ ಕಳಂಕದ ಮಾತುಗಳು ಕೇಳಿ ಬರುತ್ತಿದೆ. ಕುಣಿತ ಭಜನೆಗೆ ಹೋಗುವ ಹೆಣ್ಣುಮಕ್ಕಳ ಬಗ್ಗೆ ಅರಣ್ಯಾಧಿಕಾರಿಯೊಬ್ಬರು ಗಂಭೀರ ಅಪವಾದ ಹೊರಿಸಿ ಕೇಸ್ ಹಾಕಿಸಿಕೊಂಡು, ಅರೆಸ್ಟ್ ಆದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿಯೊಬ್ಬರು ಅಪಸ್ವರ ಎತ್ತಿದ್ದಾರೆ. ಇವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕರಾವಳಿಯಲ್ಲಿ ಭಾರೀ ಟ್ರೆಂಡ್ ಆಗಿದ್ದ ಕುಣಿತ ಭಜನೆಯಲ್ಲಿ ಕುಣಿಯುವ ಹೆಣ್ಣುಮಕ್ಕಳ ವಿರುದ್ಧ ಅರಣ್ಯ ಅಧಿಕಾರಿಯೊಬ್ಬರು ಕೀಳುಮಟ್ಟದ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಈ ಹೇಳಿಕೆಯನ್ನು ಸಮರ್ಥಿಸಿ ಮತ್ತೊಂದು ಹೇಳಿಕೆ ನೀಡಿ “ಕುಣಿತ ಭಜನೆ ಕರಾವಳಿಯ ಸಂಸ್ಕೃತಿಯಲ್ಲ. ಹಿಂದೆ ಇಂತಹ ಕುಣಿತ ಭಜನೆಯಿರಲಿಲ್ಲ. ಇದೀಗ ಕುಣಿತ ಭಜನೆಯ ಹೆಸರಲ್ಲಿ ಹೆಣ್ಣುಮಕ್ಕಳನ್ನು ನಡುರಾತ್ರಿವರೆಗೆ ಕುಣಿಸಲಾಗುತ್ತಿದೆ. ಕುಣಿತ ಭಜನೆಯ ಆಯೋಜಕರ ಮಕ್ಕಳು ನಡುರಸ್ತೆಯಲ್ಲಿ ಕುಣಿಯೋದಿಲ್ಲ. ಮೇಲ್ವರ್ಗದ ಮಹಿಳೆಯರೂ ದಾರಿಯಲ್ಲಿ ಕುಣಿಯೋದಿಲ್ಲ. ಕೆಳ ಜಾತಿಯವರ ಹೆಣ್ಣುಮಕ್ಕಳು ನಡು ರಾತ್ರಿವರೆಗೆ ಕಾಲಿಗೆ ಚಪ್ಪಲಿಯಿಲ್ಲದೆ ಕುಣಿಯುತ್ತಾರೆ” ಎಂದಿದ್ದಾರೆ. ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಪ್ರತಿಭಾ ಕುಳಾಯಿ ಈ ಹೇಳಿಕೆ ವಿವಾದದ ಕಿಡಿ ಎಬ್ಬಿಸಿದೆ. ಇದನ್ನು ಭಜನಾ ಮಂಡಳಿಗಳು, ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ. ಜಿಲ್ಲೆಯಲ್ಲಿ ಹಲವು ಕುಣಿತಾ ಭಜನಾ ತಂಡಗಳಿದ್ದು, ಧಾರ್ಮಿಕ ಶೋಭಾಯಾತ್ರೆಗಳಲ್ಲಿ ಕುಣಿತ ಭಜನೆ ಪ್ರದರ್ಶನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕಿಯ ಈ ಹೇಳಿಕೆಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಧಾರ್ಮಿಕ ಹಿನ್ನೆಲೆಯುಳ್ಳ ಕುಣಿತ ಭಜನೆ ಸದ್ಯ ರಾಜಕೀಯ ಅಂಗಳದಲ್ಲಿ ಕಾಲ್ಚೆಂಡಾಗಿದೆ. ಎರಡೂ ಕಡೆಯ ಒದೆಯುವ ಮಂದಿಯ ಕಾಲಿನಡಿಗೆ ಸಿಲುಕಿ ಒದ್ದಾಡುತ್ತಿದೆ. ಈ ವಿವಾದದ ಕಿಡಿ ತಣ್ಣಗಾಗುತ್ತದೆಯೋ ಅಥವಾ ಬೂದಿಮುಚ್ಚಿದ ಕೆಂಡವಾಗುತ್ತದೆಯೋ ಕಾದು ನೋಡಬೇಕು.