ಸುಳ್ಯ: ‘ಬಿಲ್ಲವ ಸಮಾಜದ 1 ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರು’ ಎಂದು ವಿವಾದಾತ್ಮಕ ಆಡಿಯೋ ಹೇಳಿಕೆ ನೀಡಿದ್ದ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಸಂಜೀವ ಪೂಜಾರಿಯವರನ್ನು ಮನೆಯಿಂದಲೇ ವಶಕ್ಕೆ ಪಡೆದ ಪೊಲೀಸರು ಬೆಳ್ಳಾರೆ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಸಂಜೀವ ಪೂಜಾರಿಯವರ ಬಂಧನಕ್ಕೆ ಪುತ್ತೂರಿನಲ್ಲಿ ಹಿಂದೂಪರ ಸಂಘಟನೆಗಳು ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿತ್ತು. ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಹಿಂದೂಪರ ಕಾರ್ಯಕರ್ತರು ಸಂಜೀವ ಪೂಜಾರಿಯವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು. ಪ್ರತಿಭಟನೆ ಬೆನ್ನಲ್ಲೇ ಸಂಜೀವ ಪೂಜಾರಿಯವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆ: ಮೂರು ದಿನಗಳ ಹಿಂದೆ ಸಂಜೀವ ಪೂಜಾರಿ ಕಾಣಿಯೂರು ತಮ್ಮ ಎಫ್‌ಬಿಯಲ್ಲಿ “ನಾನು ಕಂಡಂತೆ ತಕ್ಷಣಕ್ಕೆ ಸಹಾಯ ಮಾಡುವುದರಲ್ಲಿ ಮುಸಲ್ಮಾನರದ್ದು ಎತ್ತಿದ ಕೈ” ಪೋಸ್ಟ್ ಹಾಕಿದ್ದರು. ಸುರೇಶ್ ಕಾಸರಗೋಡು ಎಂಬ ಹಿಂದೂ ಕಾರ್ಯಕರ್ತ ಸಂಜೀವ ಪೂಜಾರಿಯರಿಗೆ ದೂರವಾಣಿ ಕರೆ ಮಾಡಿ ಈ ಪೋಸ್ಟ್ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಸಂಭಾಷಣೆ ವೇಳೆ ಸಂಜೀವ ಪೂಜಾರಿಯವರು ಬಿಲ್ಲವ ಸಮಾಜದ ಹೆಣ್ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. “ದ.ಕ.ಜಿಲ್ಲೆಯಲ್ಲಿ 1ಲಕ್ಷ ಬಿಲ್ಲವ ಹುಡುಗಿಯರು ಸೂಳೆಯಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆಗಳಿದೆ. ಹಿಂದುತ್ವದ ಹುಡುಗರು ಭಜನೆ ಮಾಡಿ ರಾತ್ರೆ ಮರದಡಿ ಹುಡುಗಿಯರನ್ನು ಮಲಗಿಸುತ್ತಾರೆ.” ಎಂದು ತುಳುವಿನಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.