ಕುಶಾಲನಗರ: ಶಿಕ್ಷಕರು ಎಂಬುದು ಒಂದು ಅದ್ಭುತ ಶಕ್ತಿ. ಅತ್ಯಂತ ಶ್ರೇಷ್ಠ ವೃತ್ತಿಯಾಗಿರುವ ಶಿಕ್ಷಕ ವೃತ್ತಿಯಲ್ಲಿ ತ್ಯಾಗ ಮತ್ತು ಸಹಕಾರ ಬಹು ಮುಖ್ಯವಾದುದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ಅಭಿಪ್ರಾಯಿಸಿದರು.
ಜ್ಞಾನ ಕಾವೇರಿ ಕ್ಯಾಂಪಸ್, ಚಿಕ್ಕಅಳುವಾರ ಇಲ್ಲಿನ ಹಾರಂಗಿ ಸೆಮಿನಾರ್‌ಹಾಲ್ ನಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಅತ್ಯಂತ ಶ್ರೇಷ್ಠವಾದ ಶಿಕ್ಷಕರ ವೃತ್ತಿಯಲ್ಲಿ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕು. ಆದರ್ಶ ವ್ಯಕ್ತಿಯಾಗಿ ಮೊದಲು ಶಿಕ್ಷಕ ರೂಪಿತಗೊಂಡು, ತನ್ನ ವೃತ್ತಿ ಬದುಕಿನಲ್ಲಿ ನಡೆ ನುಡಿಗಳನ್ನೊಂದಾಗಿಸಿಕೊಂಡು ಸೇವೇ ಸಲ್ಲಿಸುವ ಮಾನಸಿಕ ಸ್ಥಿರತೆ ಹೊಂದಿರಬೇಕು. ನಾಡು ನೀಡಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನಮ್ಮ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಸಮಾಜದ ಮುಂದಿನ ಪೀಳಿಗೆಯ ಆದರ್ಶಕ್ಕೆ ಅಡಿಪಾಯವನ್ನು ಒದಗಿಸುವಂತಹ ಸುಶಿಕ್ಷಿತ ಮತ್ತು ಸುಸಂಸ್ಕೃತ ಜನರನ್ನು ರೂಪುಗೊಳಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಆದ ಪ್ರೊ. ಸುರೇಸ್ ಎಂ ಅವರು ಮಾತನಾಡಿ, ಆದರ್ಶ ಶಿಕ್ಷಕ ಈ ಸಮಾಜದ ಆಸ್ತಿ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶಿಕ್ಷಕರು ಮುನ್ನಡೆಯಬೇಕು. ಸಮಾಜವನ್ನು ತಿದ್ದುವ ಬಹು ದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಡಾ. ಜ಼ಮೀರ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು.