ಬೆಳ್ತಂಗಡಿ: ಬೆಳಾಲು ನಿವಾಸಿಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ(83ವ)ರವರನ್ನು ಆ.20ರಂದು ಅವರ ಮನೆಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪದಲ್ಲಿ ಆ.24 ರಂದು ಧರ್ಮಸ್ಥಳ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕಾಸರಗೋಡು ಮುಳ್ಳೇರಿಯಾದ ರಾಘವೇಂದ್ರ ಕೆದಿಲಾಯ (54ವ) ಮತ್ತು ಆತನ ಮಗ ಮುರಳಿಕೃಷ್ಣ (21ವ)ರವರನ್ನು ಆ.27 ರಂದು ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಏನಿದು ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಕೊಲೆ ಪ್ರಕರಣ….?
(ಆ.24) ಬೆಳಾಲು ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ತನಿಖೆಯಲ್ಲಿ ಇಬ್ಬರನ್ನು ಬಂಧನ ಮಾಡಿದ್ದು, ಮಗಳಿಗೆ ಆಸ್ತಿ ಮತ್ತು ಜಾಗದಲ್ಲಿ ಪಾಲು ಕೊಡದ ಕಾರಣ ಅಳಿಯ, ಮತ್ತು ಮೊಮ್ಮಗ ಸೇರಿ ಭೀಕರವಾಗಿ ಹತ್ಯೆ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ.ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯ ಅವರ ಮಗಳ ಗಂಡನಾದ ರಾಘವೇಂದ್ರ ಕೆದಿಲಾಯ (53) ಮತ್ತು ಮೊಮ್ಮಗ ಮುರಳಿಕೃಷ್ಣ (20) ಬಂಧಿತ ಆರೋಪಿಗಳು. ಆ.24 ರಂದು ಕಾಸರಗೋಡು ಮನೆಯಿಂದ ಪೊಲೀಸರು ಇವರಿಬ್ಬರ ಬಂಧನ ಮಾಡಿದ್ದು, ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆಸ್ತಿ, ಚಿನ್ನಾಭರಣಕ್ಕೆ ಕೊಲೆ ನಡೆದಿರುವುದು ತಿಳಿದು ಬಂದಿದೆ. ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾನೆ. ಸಿಸಿ ಕ್ಯಾಮೆರಾ, ಟೆಕ್ನಿಕಲ್ ಆಧಾರದಲ್ಲಿ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಲಾಗಿದ್ದು, ಇವರಿಬ್ಬರ ಬಂಧನ ಮಾಡಲಾಗಿದೆ. ಹತ್ಯೆಯಾದ ಬಾಲಕೃಷ್ಣ ಭಟ್ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತ ಹೊಂದಿದ್ದ ಇವರ ಪತ್ನಿ ನಿವೃತ್ತ ಶಿಕ್ಷಕಿ ದಿ.ಯು. ಲೀಲಾ (75) ಇವರ ಚಿನ್ನವನ್ನು ಮಗಳಿಗೆ ನೀಡದೆ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಈ ಕಾರಣದಿಂದ ಅಳಿಯ ಹಾಗೂ ಮೊಮ್ಮಗ ಸಂಚು ರೂಪಿಸಿ ಹತ್ಯೆ ಮಾಡುವ ಯೋಜನೆ ರೂಪಿಸಿದ್ದರು.
ಕಾಸರಗೋಡಿನಿಂದಲೇ ಇವರಿಬ್ಬರು ಮಾರಕಾಸ್ತ್ರ ಸಹಿತ ಸ್ಕೂಟರ್‌ನಲ್ಲಿ ರಾಘವೇಂದ್ರ ಕೆದಿಲಾಯ, ಸ್ನೇಹಿತನ ಬೈಕ್‌ನಲ್ಲಿ ಮುರಳಿಕೃಷ್ಣ ಮಂಗಳೂರಿಗೆ ಬಂದಿದ್ದಾರೆ. ನಂತರ ಅಲ್ಲಿ ಬೈಕ್ ನಿಲ್ಲಿಸಿ ಒಂದೇ ಸ್ಕೂಟರಿನಲ್ಲಿ ಅಪ್ಪ-ಮಗ ಬೆಳಾಲಿಗೆ ಬಂದಿದ್ದು, ಬಾಲಕೃಷ್ಣ ಬಡೆಕ್ಕಿಲ್ಲಾಯರ ಮನೆಗೆ ಬಂದ ಇವರು ಬಾಳೆಎಲೆಯಲ್ಲಿ ಊಟ ಮಾಡಿ ಚಾ ಕುಡಿದು ನಂತರ ತಮ್ಮ ಯೋಜನೆಯಂತೆ ಮೊಮ್ಮಗ ಮಾರಕಾಸ್ತ್ರದಿಂದ ಕುತ್ತಿಗೆಗೆ ಕಡಿದಿದ್ದು, ಈ ವೇಳೆ ಜೀವ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಓಡಿ ಬಂದ ಬಾಲಕೃಷ್ಣ ಬಡೆಕ್ಕಿಲ್ಲಾಯರು ಬಂದಾಗ ಮತ್ತೆ ದಾಳಿ ಮಾಡಿದ್ದಾರೆ.