ಸ್ಯಾಂಡಲ್ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಇದೀಗ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಾಂತಾರ ಪ್ರೀಕ್ವೆಲ್ ಚಿತ್ರಕ್ಕಾಗಿ ಹುಟ್ಟೂರಿನಲ್ಲಿ ಸದ್ಯ ರಿಷಬ್ ಬೀಡು ಬಿಟ್ಟಿದ್ದಾರೆ. ಸದ್ಯ ಕಾಂತಾರ ಪ್ರೀಕ್ವೆಲ್ ಸಿನಿಮಾದ ಕೆಲಸದಲ್ಲಿ ನಟ ಸಖತ್ ಬ್ಯುಸಿಯಾಗಿದ್ದಾರೆ.
ಇದರ ನಡುವೆ ಪ್ರೀತಿಯ ಪತಿಯ ಹುಟ್ಟು ಹಬ್ಬಕ್ಕೆ ಪತ್ನಿ ಪ್ರಗತಿ ಶೆಟ್ಟಿ ವಿಶೇಷವಾಗಿ ಶುಭಕೋರಿದ್ದಾರೆ. ಹೌದು, ನಟ ರಿಷಬ್ ಶೆಟ್ಟಿ ಪತ್ನಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಪತಿಯ ಸಿನಿ ಜರ್ನಿಯ ಬಗ್ಗೆ ಸಣ್ಣ ವಿಡಿಯೋ ಕ್ಲಿಪ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ನನ್ನ ಜೀವನದ ಆಧಾರಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು. ನೀವು ಎಂತಹ ಅದ್ಭುತ ವ್ಯಕ್ತಿ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮನ್ನು ನಿಜವಾಗಿಯೂ ತಿಳಿದಿರುವವರು ಅದೃಷ್ಟವಂತರು. ನಿಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿ ಪ್ರತಿದಿನ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನಾವು ಒಟ್ಟಿಗೆ ಇರುವುದಕ್ಕಾಗಿ ನಾನು ಪ್ರತಿದಿನ ದೇವರಿಗೆ ಕೃತಜ್ಞನಾಗಿದ್ದೇನೆ ಎಂದು ಪ್ರಗತಿ ಶೆಟ್ಟಿ ಬಣ್ಣಿಸಿದ್ದಾರೆ.
ಸದ್ಯ ಇದೇ ವಿಡಿಯೋ ನೋಡಿದ ಅಭಿಮಾನಿಗಳು ನಟ ರಿಷಬ್ ಶೆಟ್ಟಿ ಅವರು ಹುಟ್ಟು ಹಬ್ಬಕ್ಕೆ ಶುರು ಕೋರುತ್ತಿದ್ದಾರೆ. ಇನ್ನೂ ಕೆಲವರು ರಿಷಬ್ ಶೆಟ್ಟಿ ಹಾಗೂ ಪತ್ನಿ ಇಬ್ಬರು ಮುದ್ದಾದ ಮಕ್ಕಳ ಫೋಟೋವನ್ನು ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ. ಕಳೆದ ವರ್ಷ ರಿಷಬ್ ಶೆಟ್ಟಿ ಅವರು ತಮ್ಮ ಹುಟ್ಟು ಹಬ್ಬವನ್ನು ತುಂಬಾ ಗ್ರ್ಯಾಂಡ್ ಆಗಿ ಅಭಿಮಾನಿಗಳ ಜೊತೆಗೆ ಆಚರಣೆ ಮಾಡಿಕೊಂಡಿದ್ದರು.