
ಮಂಗಳೂರು: ಅವರೊಬ್ಬ ಭಾರತೀಯ ಸೇನೆಯಲ್ಲಿ ದುಡಿದುಬಂದ ನಿವೃತ್ತ ಯೋಧ. ಭಾರತದ ಸೇನೆಯ ಸ್ಥಿತಿಗತಿ ಹೇಗಿತ್ತು, ಯೋಧರ ಕಷ್ಟ- ಸವಾಲುಗಳೇನು, ಈಗ ಹೇಗಿದೆ ಎಂಬುದರ ಬಗ್ಗೆ ಚೆನ್ನಾಗಿ ತಿಳಿದುಕೊಂಡ ವ್ಯಕ್ತಿ. ದೇಶಕ್ಕಾಗಿ ತಮ್ಮ ಕುಟುಂಬ, ಸಂಬಂಧಿಕರು, ಗೆಳೆಯರು ಎಲ್ಲರನ್ನೂ ಬಿಟ್ಟು ಗಡಿಕಾಯುವ ಯೋಧನ ಮನಸ್ಥಿತಿಯ ಬಗ್ಗೆ ಅರಿತುಕೊಂಡವರು. 1971ರಲ್ಲಿ ಭಾರತ- ಬಾಂಗ್ಲಾ ಯುದ್ಧದಲ್ಲಿ ಪಾಲ್ಗೊಂಡಿದ್ದ ವಾಯುಪಡೆಯ ಯೋಧರೊಬ್ಬರು ಮಂಗಳೂರಿನಲ್ಲಿ ಮಾಧ್ಯಮದ ಮುಂದೆ ಗದ್ಗದಿತರಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮಂಗಳೂರಿನಲ್ಲಿ ನಿವೃತ್ತ ಸೈನಿಕ ಕ್ಯಾ. ಬ್ರಿಜೇಶ್ ಚೌಟ ಚುನಾವಣಾ ಕಣಕ್ಕಿಳಿದಿರೋದು.




ತನ್ನದೇ ರೀತಿ ಗಡಿಯಲ್ಲಿ ದೇಶದ ಪರವಾಗಿ ಹೋರಾಡಿದ್ದ ವ್ಯಕ್ತಿಯೊಬ್ಬ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಬಗ್ಗೆ ಗದ್ಗದಿತರಾದ ಮಂಗಳೂರಿನ ಕಂಕನಾಡಿ ನಿವಾಸಿ ದಿವಾಕರ್, ತನ್ನ ಒಂದು ತಿಂಗಳ ಪಿಂಚಣಿ ದುಡ್ಡನ್ನು ದಾನ ನೀಡಿ ಚುನಾವಣೆ ವೆಚ್ಚಕ್ಕೆ ನೆರವಾಗುತ್ತಿದ್ದೇನೆ ಎಂದಿದ್ದಾರೆ. 1969ರಿಂದ ಹತ್ತು ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆಗೈದು ನಿವೃತ್ತಿಯಾದ, ಮೂಲತಃ ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ 72 ವರ್ಷದ ಯೋಧ ದಿವಾಕರ್ ಗಡಿಕಾಯುವ ಯೋಧನಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಕ್ಕೆ ಆನಂದಾಶ್ರು ಸುರಿಸಿದ್ದಾರೆ.


ಇದೇ ವೇಳ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶಕ್ಕಾಗಿ ದುಡಿದು ನಿವೃತ್ತಿಯಾದವರನ್ನು ನಮ್ಮ ಸರಕಾರ, ಅಧಿಕಾರಿ ವರ್ಗ ಕ್ಷುಲ್ಲಕವಾಗಿ ನೋಡುತ್ತ ಬಂದಿದೆ. ಈ ಬಾರಿ ಸೇನೆಯಲ್ಲಿ ದುಡಿದ ವ್ಯಕ್ತಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಅವರನ್ನು ಗೆಲ್ಲಿಸಲು ನಾವು ಪೂರ್ಣ ಮಟ್ಟದ ಬೆಂಬಲ ನೀಡುತ್ತೇವೆ. ನನ್ನ ಒಂದು ತಿಂಗಳ ಪಿಂಚಣಿ ದುಡ್ಡು ಸಣ್ಣ ಮೊತ್ತ. ಆದರೆ ನನ್ನದೂ ಕಿಂಚಿತ್ತು ಸಹಾಯ ಇರಲೆಂದು ತಿಂಗಳಿಗೆ ಬರುವ ಪಿಂಚಣಿ ಮೊತ್ತವನ್ನು ನೀಡುತ್ತಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಅಧಿಕಾರ ಹಿಡಿದರೆ ದೇಶ ಉಳಿಯಲ್ಲ
ದೇಶಕ್ಕಾಗಿ ಈ ಬಾರಿ ಬಿಜೆಪಿಗೆ ಮತ ನೀಡಬೇಕಾಗಿದೆ. ಕಾಂಗ್ರೆಸ್ ದೇಶ ಹಿತ ಬಯಸುವ ಪಕ್ಷ ಅಲ್ಲ. ಮೋದಿಯವರು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಯೋಧರ ಬಗ್ಗೆ ಕಾಳಜಿ ಹೊಂದಿದ್ದಾರೆ. ಸೇನೆಯಲ್ಲಿ ಸೌಲಭ್ಯ ಹೆಚ್ಚಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಅಧಿಕಾರ ನೀಡಿದಂತಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ಅಧಿಕಾರ ನಡೆಸುವಂತಾದರೆ ಇನ್ನು 50 ವರ್ಷದಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ. ಹಾಗಾಗಿ ಮತದಾರರು ದೇಶದ ಹಿತಕ್ಕಾಗಿ ಬಿಜೆಪಿ ಪರ ಮತ ಚಲಾಯಿಸಬೇಕಿದೆ ಎಂದರು.
ಸೇನೆಯಲ್ಲಿದ್ದವರು ದೇಶದ ಬಗ್ಗೆ ಕಾಳಜಿ ಇದ್ದವರು. ಇಂಥವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಕಡಿಮೆಯಾಗಬಹುದೆಂಬ ವಿಶ್ವಾಸ ಇದೆ. ಜನ ಸಾಮಾನ್ಯರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವರೆಂಬ ವಿಶ್ವಾಸ ಇದೆ ಎಂದು ಹೇಳಿದರು.
ವಾಯುಪಡೆಯಲ್ಲಿ ಕಾರ್ಪೋರಲ್ ಆಗಿ ಕೆಲಸ ಮಾಡಿದ್ದ ದಿವಾಕರ್ ಮೂಲತಃ ಉಳ್ಳಾಲದ ಮುಕ್ಕಚ್ಚೇರಿಯವರು. ಅಲ್ಲಿದ್ದ ಜಾಗವನ್ನು ತಮ್ಮ ಕುಟುಂಬದ ದೈವಸ್ಥಾನಕ್ಕಾಗಿ ಬಿಟ್ಟು ಕೊಟ್ಟಿದ್ದಾರೆ. ಈಗ ಮಕ್ಕಳ ಜೊತೆಗೆ ಮಂಗಳೂರಿನ ಕಂಕನಾಡಿಯಲ್ಲಿ ನೆಲೆಸಿದ್ದಾರೆ.