Home ಉಡುಪಿ ಉಡುಪಿ: ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ- ಗಂಭೀರ ಗಾಯ

ಉಡುಪಿ: ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ- ಗಂಭೀರ ಗಾಯ

0

ಉಡುಪಿ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೊಟ್ಟು ಬಳಿ ಚಿರತೆಯೊಂದು ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.


ಬಿಹಾರ ಮೂಲದ ನದಿಯಲ್ಲಿ ಮರಳುಗಾರಿಕೆ ನಡೆಸುವ ಕಾರ್ಮಿಕ ಸುರೇಂದ್ರ (55 ವ) ಗಾಯಗೊಂಡ ವ್ಯಕ್ತಿ.ಆತ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್‌ ಅವರ ಮನೆ ಬಳಿಯ ಕಲ್ಲೊಟ್ಟು ಸಂತೋಷ್‌ ಪೂಜಾರಿ ಅವರ ಮನೆಯ ವರಾಂಡದಲ್ಲಿ ಮಲಗಿದ್ದು, ರಾತ್ರಿ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.

ಕೆನ್ನೆ, ಗಲ್ಲ ಮತ್ತು ಮುಖಕ್ಕೆ ಗಾಯಗೊಳಿಸಿದ್ದು ರಕ್ತದ ಕೋಡಿ ಹರಿದಿದೆ. ಚಿಕಿತ್ಸೆಗಾಗಿ ಅವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ದಾಳಿ ನಡೆಸಿದ ಚಿರತೆಯೊಂದಿಗೆ ಮರಿ ಚಿರತೆಯೂ ಇತ್ತು ಎನ್ನಲಾಗಿದೆ.

ಕಲ್ಲೊಟ್ಟು, ಸೊರ್ಪು, ಆಗೋಳಿಬೈಲು, ಪದವು ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ಚಿರತೆ ಓಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ಕಲ್ಲೊಟ್ಟು ಸಂಗೀತಾ ನಾಯ್ಕ ಅವರ ಮನೆಯ ಎರಡು ಸಾಕು ನಾಯಿಗಳನ್ನು ಚಿರತೆ ಬೇಟೆಯಾಡಿ ನಾಯಿಗಳೆರಡನ್ನೂ ತಿಂದು ಹಾಕಿದೆ.

ಕಳೆದ ನವೆಂಬರ್‌ನಲ್ಲಿ ಇದೇ ಪರಿಸರದ ಕಲ್ಲೊಟ್ಟು ದೇವಣ್ಣ ನಾಯಕ್‌ ಅವರ ಮನೆಯ ಸಾಕು ನಾಯಿಯನ್ನು ಚಿರತೆ ಬೇಟೆಯಾಡಿ ಅರ್ಧ ತಿಂದು ಹಾಕಿ ಉಳಿದರ್ಧ ದೇಹವನ್ನು ಮಲ್ಲಿಗೆ ಗಿಡದ ತೋಟದ ಬಳಿ ಬಿಟ್ಟು ಹೋಗಿತ್ತು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here