ಪುತ್ತೂರು: ಹೆಚ್ಚಳವಾದ ಗ್ರಾಹಕ ಸೂಚ್ಯಾಂಕ 568 ಅಂಶಗಳಿಗೆ ಅನುಗುಣವಾಗಿ ಎ.1ರಿಂದ ಪ್ರತಿ ಸಾವಿರ ಬೀಡಿಗೆ ರೂ 22.70 ರಂತೆ ತುಟ್ಟಿಭತ್ತೆ ಏರಿಕೆ ಆಗಿ ವೇತನ ಹೆಚ್ಚಳವಾಗಲಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಗುಡ್ಡಪ್ಪ ಗೌಡ ತಿಳಿಸಿದ್ದಾರೆ.
ಸದ್ಯ ಒಂದು ಸಾವಿರ ಬೀಡಿಗೆ ರೂ 252.34 ರಂತೆ ವೇತನ ನೀಡಲಾಗುತ್ತಿದ್ದು, ಈ ವರ್ಷದ ಡಿ.ಎ. ಸೇರಿಸಿದರೆ ಎ.1ರಿಂದ ಪ್ರತಿ 1,000 ಬೀಡಿಗೆ ರೂ. 275.04 ವೇತನ ನೀಡಬೇಕಾಗಿದೆ. ಇದರಿಂದ ಪಿಎಫ್ ಹಣ ರೂ. 27/- ಕಡಿತಗೊಂಡು ಪ್ರತಿ 1,000 ಬೀಡಿಗೆ ರೂ 248.04 ರಂತೆ ಕಾರ್ಮಿಕರ ಹಸ್ತ ವೇತನ ನೀಡಬೇಕಾಗಿದೆ. 01.04.2018 ರಲ್ಲಿ ಸರಕಾರ ನಿಗದಿಪಡಿಸಿದ ವೇತನದಂತೆ ಈಗ ನೀಡಬೇಕಿದ್ದ ಕೂಲಿ ಪ್ರತಿ 1,000 ಬೀಡಿಗೆ ರೂ 292.32 ಆಗಿದ್ದು ಅದಕ್ಕೆ ಈ ವರ್ಷದ ಡಿ.ಎ. ರೂ 22.70 ಸೇರಿಸಿದರೆ ಬೀಡಿ ಕಾರ್ಮಿಕರಿಗೆ ಬೀಡಿ ಮಾಲಕರು ನಿಜವಾಗಿ ನೀಡಬೇಕಾಗಿರುವ ಕಾನೂನು ಬದ್ದ ವೇತನ ಪ್ರತಿ 1,000 ಬೀಡಿಗೆ ರೂ 315.02 ಆಗಿರುತ್ತದೆ. ಇದನ್ನು ಪಡೆಯಲು ಕಾರ್ಮಿಕರು ಹೋರಾಟಕ್ಕೆ ಸಿದ್ದರಾಗಬೇಕಿದೆ ಎಂದವರು ಕಾರ್ಮಿಕರಿಗೆ ಕರೆ ನೀಡಿದರು. ಕಳೆದ 5 ವರ್ಷ ಕಾಲವಿದ್ದ ಬಿಜೆಪಿ ಸರಕಾರ ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸಿಲ್ಲ, ಈಗ ಅಧಿಕಾರದಲ್ಲಿರುವ ಕರ್ನಾಟಕ ಸರಕಾರವಾದರೂ ಬೀಡಿ ಕಾರ್ಮಿಕರಿಗೆ ಈ ವೇತನ ತೆಗೆಸಿಕೊಡಲು ಮುಂದಾಗಬೇಕು ಎಂದವರು ಸರಕಾರವನ್ನು ಒತ್ತಾಯಿಸಿದರು. ವೇತನ ಸರಿಯಾಗಿ ಸಿಗದಿದ್ದರೆ ಹಾಗೂ ಬೇರೆ ಸಮಸ್ಯೆಗಳು ಎದುರಾದರೆ 9448155980, 8792591538 ಗೆ ಸಂಪರ್ಕಿಸಬಹುದು ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.