ಪುತ್ತೂರು: ನ.13ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ನೂರಾರು ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದು ಕಾರ್ಯಕ್ರಮಕ್ಕೆ ಬರುವ ಪ್ರತೀಯೊಬ್ಬರನ್ನೂ ಉಪಚರಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಹೇಳಿದರು.



ಶಾಸಕರ ಕಚೇರಿಯಲ್ಲಿ ನಡೆದ ಸ್ವಯಂ ಸೇವಕರ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೆ ವೃದ್ದರು, ಮಹಿಳೆಯರು, ಮಕ್ಕಳು, ಸಣ್ಣ ಮಕ್ಕಳಿರುವ ತಾಯಂದಿರು, ಗರ್ಭಿಣಿಯರು ಬರುವ ಕಾರಣ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ೫೦ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರಣ ಎಲ್ಲೂ ಗೊಂದಲವಾಗದಂತೆ ನೋಡಿಕೊಳ್ಳಬೇಕು. ವಿಕಲಚೇತನರು ಕಾರ್ಯಕ್ರಮಕ್ಕೆ ಬಂದಲ್ಲಿ ಅವರನ್ನು ವಿಶೇಷವಾಗಿ ಪರಿಗಣಿಸಬೇಕು. ಕುಡಿಯುವ ನೀರು ಮತ್ತು ಆಂಬುಲೆನ್ಸ್ ಹಾಗೂ ವೈದ್ಯರ ವ್ಯವಸ್ಥೆಯನ್ನು ಸ್ಥಳದಲ್ಲೇ ನಿಯೋಜನೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.


ಎಲ್ಲರೂ ಭಾಗವಹಿಸಿ ನಮಗೆ ಆಶೀರ್ವದಿಸಿ; ಸುಮಾ ಅಶೋಕ್ ರೈ
ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ನಮ್ಮನ್ನು ಆಶೀರ್ವದಿಸಬೇಕು. ಇದರಲ್ಲಿ ಯಾವುದೇ ಪಕ್ಷ, ಜಾತಿ, ಧರ್ಮದ ಬೇದವಿಲ್ಲ. ಸಹೋದರ, ಸಹೋದರಿಯರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಭೋಜನ ಕಾರ್ಯಕ್ರಮದಲ್ಲಿ ಸೇರಿಕೊಳ್ಳುವಂತೆ ಟ್ರಸ್ಟ್ ಮುಖ್ಯಸ್ಥೆ ಸುಮಾ ಅಶೋಕ್ ರೈ ಮನವಿ ಮಾಡಿದರು. ವಸ್ತ್ರ ವಿತರಣಾ ಕಾರ್ಯಕ್ರಮದಂದು ಬರುವ ಜನರಿಗೆ ಕ್ರೀಡಾಂಗಣದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ನಿಮ್ಮ ಆಗಮನವೇ ನಮಗೆ ಆಶೀರ್ವಾದ: ಸುದೇಶ್ ಶೆಟ್ಟಿ
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಅದುವೇ ನಮಗೆ ನೀವು ಕೊಡುವ ಆಶೀರ್ವಾದವಾಗಿದೆ ಎಂದು ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಹೇಳಿದರು. ಊಟದ ವ್ಯವಸ್ಥೆ ಇರುವ ಕಾರಣ ಎಲ್ಲೂ ಗೊಂದಲವಾಗದಂತೆ ಅನೇಕ ಕೌಂಟರುಗಳನ್ನು ಮಾಡಲಾಗಿದೆ. ವಸ್ತ್ರ ವಿತರಣೆಗೂ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು ಜನ ಅಧಿಕ ಸೇರುವ ಕರಣ ಕಷ್ಟವಾಗಬಹುದು ಎಂಬ ಚಿಂತನೆ ಯಾರಿಗೂ ಬೇಡ. ಯಾರಿಗೂ ತೊಂದರೆಯಾಗದಂತೆ ಸುಸಜ್ಜಿತ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಟ್ರಸ್ಟಿಗಳಾದ ಮಹಮ್ಮದ್ ಬಡಗನ್ನೂರು, ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ, ನಿರಂಜನ್ ರೈ ಮಠಂತಬೆಟ್ಟು ಹಗೂ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು.