ಮಂಗಳೂರು : ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಾಟ ಮಾಡುವ ಸ್ಮಗ್ಲರ್ ಗಳು ಇದೀಗ ಹೊಸ ರೀತಿಯ ಅವಿಷ್ಕಾರ ಮಾಡಿದ್ದು, ಈ ಬಾರಿ ಖೀರ್ ಮಿಕ್ಸ್ ಪಾಕೆಟ್ ಗಳಲ್ಲಿ ಚಿನ್ನ ಇಟ್ಟು ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಮಂಗಳೂರು ಅಂತಾರಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದುಬೈನಿಂದ ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಎಂಐಎ) ಬಂದಿಳಿದ ಪ್ರಯಾಣಿಕರೊಬ್ಬರು ‘ಖೀರ್ ಮಿಕ್ಸ್’ ಪೊಟ್ಟಣಗಳಲ್ಲಿ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯಿಂದ 24 ಕ್ಯಾರೆಟ್‌ನ 347 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ₹ 20 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಟ್ವೀಟ್ ಮಾಡಿದೆ.
ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಶುಕ್ರವಾರ ಎಂಐಎಗೆ ಬಂದಿಳಿದ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ ಬಳಿ ‘ಕಿಚನ್ ಟ್ರೆಜರ್ಸ್’ ಖೀರ್ ಮಿಕ್ಸ್‌ನ ಐದು ಪೊಟ್ಟಣಗಳಿದ್ದವು. ಸಂದೇಹ ಬಂದಿದ್ದರಿಂದ ಅವುಗಳನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಚಿನ್ನ ಇರುವುದು ಗೊತ್ತಾಯಿತು‘ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಮೂಲಗಳು ತಿಳಿಸಿವೆ.