ಮಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳು ಪೊಲೀಸರೂ ಸೇರಿದಂತೆ ಹಲವು ಮನೆಗಳ ಮೇಲೆ ಕಲ್ಲು ತೂರಿರುವ ಘಟನೆ ನಡೆದಿದ್ದು ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದೇ ಶಿವಮೊಗ್ಗದಲ್ಲಿ ಕಳೆದ ವಾರ ಭಾರೀ ಸಂಖ್ಯೆಯೊಂದಿಗೆ ಯಾವ ಗಲಭೆಯೂ ಇಲ್ಲದೇ ಗಣೇಶ ವಿಸರ್ಜನೆ ಆಯಿತು.ಆದರೆ ಈದ್ ಮೆರವಣಿಗೆಯಲ್ಲಿ ಕೋಮುದಳ್ಳುರಿ ಹೊತ್ತಿಸಲಾಗಿದೆ. ಇದಕ್ಕೆಲ್ಲ ಕಾರಣ ಜಿಹಾದಿ ಮಾನಸಿಕತೆಯ ಕಿಡಿಗೇಡಿಗಳು ಹಾಗೂ ಸೆಕ್ಯುಲರ್ ಮುಖವಾಡದ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಔರಂಗಜೇಬನಂತಹ ಮತಾಂಧನ ಬ್ಯಾನರ್ ಅಳವಡಿಸುವುದು, ಕೈಯಲ್ಲಿ ತಲ್ವಾರ್ ಹಿಡಿದು ಪ್ರಚೋದಕಾರಿ ಘೋಷಣೆಗಳನ್ನು ಕೂಗುವುದು, ಕೊನೆಗೆ ಹಿಂದೂಗಳ ಮೇಲೆ ಕಲ್ಲೆಸೆಯುವುದು ಇವೆಲ್ಲ ವ್ಯವಸ್ಥಿತ ಗಲಭೆಯ ಷಡ್ಯಂತ್ರದ ಭಾಗವಾಗಿದೆ. ಟಿಪ್ಪು ಸುಲ್ತಾನ್ ಕಾಲಡಿಯಲ್ಲಿ ಕೇಸರಿ ಬಣ್ಣದ ಪಗಡೆ ತೊಟ್ಟ ವ್ಯಕ್ತಿ ಮಲಗಿರುವ ಕಟೌಟ್ ಅಳವಡಿಸಿದ್ದು ವಿವಾದವಾಗುತ್ತಿದ್ದಂತೆ ಸ್ವತಃ ಎಸ್‌ಪಿ ನೇತೃತ್ವದಲ್ಲಿ ಕಟೌಟ್ ಗೆ ಬಿಳಿ ಬಣ್ಣ ಬಳಿಯಲಾಗಿತ್ತು. ಹಾಗಾಗಿಯೇ ಕಿಡಿಗೇಡಿಗಳು ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಮಾದರಿಯಲ್ಲಿ ಗಲಭೆಗೆ ಸಂಚು ರೂಪಿಸಿದ್ದಿರಬಹುದು. ಆದರೂ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.