Home ಕರಾವಳಿ ಮಂಗಳೂರು: ಸಿಸಿಬಿ ಕಾರ್ಯಾಚರಣೆ: ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಸೆರೆ

ಮಂಗಳೂರು: ಸಿಸಿಬಿ ಕಾರ್ಯಾಚರಣೆ: ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಸೆರೆ

0

ಮಂಗಳೂರು: ನಗರ ಹೊರವಲಯದ ಅಡ್ಯಾರ್ ಪರಿಸರದಲ್ಲಿ ಜಾನುವಾರು ಅಕ್ರಮ ಸಾಗಾಟದ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಫರಂಗಿಪೇಟೆ ಸಮೀಪದ ಅಮೆಮಾರ್‌ನ ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳಾಗಿದ್ದಾರೆ. ಫರಂಗಿಪೇಟೆ ಪರಿಸರದಲ್ಲಿ ಅಕ್ರಮ ಜಾನುವಾರು ಸಾಗಾಟದ ಎರಡು ತಂಡಗಳ ನಡುವೆ ವಿಷಯದಲ್ಲಿ ಗಲಾಟೆ ನಡೆಯುತ್ತಿತ್ತು. ಕೊಲೆ, ಕೊಲೆಯತ್ನ, ಜಾನುವಾರು ಕಳ್ಳತನ ಹಾಗೂ ಇತರ ಪ್ರಕರಣದಲ್ಲಿ ಆರೋಪಿಗಳ ತಂಡ ಭಾಗಿಯಾಗಿತ್ತು. ಅಕ್ರಮ ಜಾನುವಾರು ಸಾಗಾಟ ವಿಚಾರವಾಗಿದ್ದರಿಂದ ಈ ವಿಚಾರವು ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಈ ನಡುವೆ ಮಂಗಳೂರು ನಗರದ ಅಡ್ಯಾರ್ ಪರಿಸರದಲ್ಲಿ ತಲವಾರುಗಳೊಂದಿಗೆ ತಸ್ಲಿಂ ಹಾಗೂ ಆತನ ಸಹಚರರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ಮಾರಕಾಯುಧಗಳಾದ ತಲವಾರುಗಳೊಂದಿಗೆ ಹೊಂಚು ಹಾಕುತ್ತಿದ್ದ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿ ಕೊಂಡಿರುವ ಅವರ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳ ಪೈಕಿ ತಸ್ಲೀಮ್ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಗಳು, ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ. ಇನ್ನೋರ್ವ ಆರೋಪಿ ಹೈದರಾಲಿಯು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಶದಿಂದ ತಲವಾರುಗಳು-2, ಚೂರಿ-1, ಮೊಬೈಲ್ ಫೋನುಗಳು-2, ಹಾಗೂಮಹೇಂದ್ರ ಪಿಕ್ ಅಪ್ ನ್ನು ವಶಪಡಿಸಿಕೊಂಡಿದ್ದು ಇವುಗಳ ಮೌಲ್ಯ ರೂ. 5,21,000 ಆಗಿದೆ.ಆರೋಪಿಗಳ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here