ಮಂಗಳೂರು: ವಿದೇಶಿ ಮಹಿಳೆಯ ಹೆಸರಿನಿಂದ ಪರಿಚಯಿಸಿಕೊಂಡು 8.42 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಗೆ ಫೇಸ್‌ಬುಕ್ ಖಾತೆಯ ಮೂಲಕ ಅಪರಿಚಿತ ಮಹಿಳೆ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸಿ ವಾಟ್ಸ್‌ಆ್ಯಪ್ ನಂಬರ್ ಪಡೆದುಕೊಂಡಿದ್ದಳು. ಅನಂತರ ವಾಟ್ಸ್‌ಆ್ಯಪ್‌ಗೆ ಸಂದೇಶಗಳನ್ನು ಕಳುಹಿಸಿ ಕಳುಹಿಸಿ – ತಾನು ವಿದೇಶದಲ್ಲಿರುವುದಾಗಿಯೂ ಭಾರತಕ್ಕೆ ಬಂದು ಭೇಟಿ ಮಾಡುವುದಾಗಿಯೂ ತಿಳಿಸಿದ್ದಳು. ಅನಂತರ ಸೆ. 21ರಂದು ಕರೆ ಮಾಡಿ ತಾನು ಭಾರತಕ್ಕೆ ಬಂದಿದ್ದು ತನ್ನ ಬಳಿ 70,000 ವಿದೇಶಿ ಕರೆನ್ಸಿ ಇದ್ದು ಅದನ್ನು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿ ವಶಪಡಿಸಿಕೊಂಡಿದ್ದಾನೆ. ಅದನ್ನು ಬಿಡಿಸಲು ಹಣ ಪಾವತಿಸಬೇಕಾಗಿದೆ ಎಂದಳು. ಅಲ್ಲದೆ ಕಸ್ಟಮ್ ಅಧಿಕಾರಿಯೆಂದು ಬಿಂಬಿಸಿ ಬೇರೊಂದು ವ್ಯಕ್ತಿಯ ಮೂಲಕ ಮಾತನಾಡಿಸಿದಳು. ಇದನ್ನು ನಂಬಿದ ದೂರುದಾರರು ಮಹಿಳೆ ನೀಡಿದ ಬ್ಯಾಂಕ್ ಗಳ ಖಾತೆಗೆ ಸೆ. 21ರಿಂದ 25ರ ವರೆಗೆ ಹಂತ ಹಂತವಾಗಿ ಒಟ್ಟು 8,43,050 ರೂ. ವರ್ಗಾಯಿಸಿದ್ದಾರೆ. ಅನಂತರವೂ ಮಹಿಳೆ ಹೆಚ್ಚಿನ ಹಣ ಪಾವತಿಸುವಂತೆ ತಿಳಿಸಿದಾಗ ಅನುಮಾನಗೊಂಡು ತನ್ನ ಮನೆಯವರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದ್ದು ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.