ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿರುವ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸ್ಪೋಟಕ ಹೇಳಿಕೆವೊಂದನ್ನು ನೀಡಿದ್ದಾರೆ. ಸ್ವಾಮೀಜಿ ಬಂಧನವಾದರೆ, ದೊಡ್ಡ-ದೊಡ್ಡವರ ಹೆಸರುಗಳು ಬಹಿರಂಗವಾಗಲಿವೆ ಎಂದು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಮಹಿಳಾ ಪುನರ್ವಸತಿ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತಂದಾಗ ಚೈತ್ರಾ ಈ ಆರೋಪ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್‌ನ ಬಾಕಿ ಬಿಲ್‌ಗಳನ್ನು ಪಡೆಯಲು ದೂರುದಾರ ಗೋವಿಂದ ಬಾಬು ಪೂಜಾರಿ ಸಂಚು ನಡೆಸಿದ್ದಾರೆ ಎಂದು ಇದೇ ವೇಳೆ ಚೈತ್ರಾ ಕುಂದಾಪುರ ಹೇಳಿದ್ದಾರೆ.
ಸ್ವಾಮೀಜಿಯನ್ನು ಬಂಧಿಸಿದ ನಂತರ ಹಲವಾರು ದೊಡ್ಡ ನಾಯಕರ ಹೆಸರುಗಳು ಹೊರಬರುತ್ತವೆ ಎಂದು ಚೈತ್ರಾ ಹೇಳಿದ್ದಾರೆ.
‘ಒಂದು ವೇಳೆ, ಸ್ವಾಮೀಜಿಯನ್ನು ಬಂಧಿಸಿದರೆ ಸತ್ಯ ಹೊರಬರಲಿದೆ. ಹಲವಾರು ದೊಡ್ಡ ನಾಯಕರ ಹೆಸರುಗಳು ಹೊರಬೀಳಲಿವೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಉಳಿದಿರುವುದರಿಂದ ಗೋವಿಂದ ಬಾಬು ಪೂಜಾರಿ ಅವರು ಈ ಸಂಚನ್ನು ರೂಪಿಸಿದ್ದಾರೆ’ ಎಂದು ಚೈತ್ರಾ ಬಹಿರಂಗ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಸಂಜೆ ಬೆಂಗಳೂರು ಸಿಸಿಬಿ ಪೊಲೀಸರು ಚೈತ್ರಾ ಅವರನ್ನು ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಐವರನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ.
ಗೋವಿಂದ ಬಾಬು ಪೂಜಾರಿ ಅವುರ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ಧ ದೂರು ದಾಖಲಿಸಿದ್ದರು. ಆ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಅವರು ಆಶ್ವಾಸನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 5 ಕೋಟಿ ರೂಪಾಯಿ ಗೋವಿಂದ ಬಾಬು ಪೂಜಾರಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಆರೋಪಿ ನಂಬರ್ 3 ಎಂದು ಬಳ್ಳಾರಿಯ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಹೆಸರಿಸಲಾಗಿದೆ. ಅವರಿಗೆ 5 ಕೋಟಿ ಮತ್ತು 1.5 ಕೋಟಿ ರೂ.ಗಳನ್ನು ಕಂತುಗಳಲ್ಲಿ ನೀಡಲಾಗಿದೆ ಎಂದು ದೂರು ನೀಡಲಾಗಿದೆ.
ದೂರುದಾರ ಪೂಜಾರಿ ಅವರು ಚೆಫ್ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಎಂಬ ಕಂಪನಿಯನ್ನು ಹೊಂದಿದ್ದಾರೆ. 2017 ರಿಂದ ನಗರದಲ್ಲಿ 98 ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆಯನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಅವರ 35 ಕೋಟಿ ಬಿಲ್‌ಗಳು ಬಾಕಿ ಉಳಿದಿವೆ ಎಂದು ಹೇಳಲಾಗುತ್ತಿದೆ.
ಚೈತ್ರಾ ಕುಂದಾಪುರ ಮತ್ತು ಇತರ ಐವರನ್ನು ಬಂಧಿಸಿದ ನಂತರ ನಗರ ಅಪರಾಧ ವಿಭಾಗ (ಸಿಸಿಬಿ) ಬುಧವಾರ ಅವರನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಆರು ಆರೋಪಿಗಳನ್ನು ಸೆಪ್ಟೆಂಬರ್ 23ರ ವರೆಗೆ ಸಿಸಿಬಿ ವಶಕ್ಕೆ ನೀಡಿದೆ.