ಬಂಟ್ವಾಳ: ತನ್ನ ಪತ್ನಿ ಮನೆಗೆ ಬಂದಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ನಡೆದಿದೆ. ಉಳ್ಳಾಲ ತಾಲೂಕು ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ (35) ಆತ್ಮಹತ್ಯೆಗೈದ ವ್ಯಕ್ತಿ. ರವೀಂದ್ರ ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮಧ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಪತ್ನಿಯ ಮನೆ ವಾಪಸ್ಸಾಗಿದ್ದರು. ಸಂಜೆ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ ಪತ್ನಿ ನೆರೆಮನೆಯವರಲ್ಲಿ ವಿಚಾರಿಸಿದ್ದಾರೆ. ಅವರು ಮನೆ ಕಡೆ ತೆರಳಿದಾಗ ಚಾವಡಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ. ಆರ್ಥಿಕವಾಗಿ ನೊಂದು ಕೃತ್ಯ ಎಸಗಿರುವ ಶಂಕೆಯಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.