ಬೆಂಗಳೂರು:ಬೆಳ್ತಂಗಡಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ಹೊಸದಾಗಿ ತನಿಖೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ವಕೀಲ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ಜಿ.ನವೀನ್ ಕುಮಾರ್ ಮತ್ತು ಬಲ್ವಾಡು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ, ಅರ್ಜಿಯಲ್ಲಿ ಅರ್ಜಿದಾರರು ಎತ್ತಿರುವ ಮನವಿ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಮೇಲ್ಮನವಿಯಲ್ಲಿ ತನಿಖಾ ಲೋಪಗಳನ್ನು ಪರಿಗಣಿಸಬಹುದಾಗಿದೆ ಎಂದು ಹೇಳಿದೆ.
ಮೇಲ್ಮನವಿ ಸಲ್ಲಿಸಲು ಸಂತ್ರಸ್ತ ಕುಟುಂಬಕ್ಕೆ ನೀವು ಸಹಾಯ ಮಾಡಿ ಎಂಬುದಾಗಿ ಸಲಹೆ ನೀಡಿದ್ದಲ್ಲದೆ, ಸಭೆ-ಸಮಾರಂಭ, ಧರಣಿ ಹಾಗೂ ಸಾರ್ವಜನಿಕರ ಭಾವನೆಗಳಿಂದ ಕಾನೂನು ಚೌಕಟ್ಟು ಮೀರಲು ಸಾಧ್ಯವಿಲ್ಲ. ಅರ್ಜಿದಾರರ ಉದ್ದೇಶ ಒಳ್ಳೆಯದಿದ್ದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಾನೂನಿನ ಮಿತಿಯಲ್ಲಿ ವ್ಯವಹರಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
ವಿಚಾರಣೆ ವೇಳೆ ಕೆಲ ಕಾಲ ಅರ್ಜಿದಾರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದಿಸಿ, 2012ರಲ್ಲಿ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿದೆ. ಪ್ರಕರಣದ ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಧಾರಗಳು ಇಲ್ಲ ಎಂಬ ಕಾರಣಕ್ಕೆ ಆತನನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಆದರೆ ಘಟನೆ ನಡೆದಿರುವುದು ನಿಜವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಂದರೆ ನಿಜವಾದ ದೋಷಿ ಪ್ರಕರಣದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದರಿಂದ ಮರು ತನಿಖೆ ನಡೆಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.ಹಾಗಾಗಿ, ಸಿಬಿಐ, ಇಲ್ಲವೇ ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಎಸ್‌ಐಟಿಯಿಂದ ಹೊಸದಾಗಿ/ಮರು ತನಿಖೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದರು.