ಮಂಗಳೂರು: ಇಡೀ ದೇಶವು ಕಾತುರದಿಂದ ನಿರೀಕ್ಷಿಸುತ್ತಿರುವ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯುವ ಕ್ಷಣವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಈ ಸಮಯದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ವ್ಯವಸ್ಥೆಯನ್ನು ಮಾಡುತ್ತಿದೆ.
ಆ.23ರ ಬುಧವಾರ ಸಂಜೆ 5.20ರಿಂದ 6.30ರ ವರೆಗೆ ಚಂದ್ರನ ಸನಿಹದಲ್ಲಿ ನಡೆಯುವ ಈ ಕೌತುಕವನ್ನು ವೀಕ್ಷಿಸಲು ಕೇಂದ್ರದ ಸಭಾಭವನದಲ್ಲಿ ದೊಡ್ಡ ಪರದೆಯ ಮೇಲೆ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಕೇಂದ್ರದ ಸಿಬ್ಬಂದಿ ಇದರ ಬಗೆಗಿನ ಮಾಹಿತಿ ಹಾಗೂ ವೈಶಿಷ್ಟ್ಯಗಳನ್ನು ಆಸಕ್ತರಿಗೆ ವಿವರಿಸುವರು.ಈ ರೀತಿಯ ಪ್ರಸಾರಕ್ಕೆ ವ್ಯವಸ್ಥೆಯಿರುವ ಎಲ್ಲಾ ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ನಮ್ಮ ವಿಜ್ಞಾನಿಗಳ ಈ ಸಾಧನೆಯ ನೇರ ಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಮಾಡಿ, ವಿದ್ಯಾರ್ಥಿಗಳಲ್ಲಿ ಇಂತಹ ಸಾಧನೆಗಳನ್ನು ಮಾಡಲು ಸ್ಫೂರ್ತಿ ನೀಡುವ ಪ್ರಯತ್ನವನ್ನು ಮಾಡುವಂತೆ ಪ್ರಾದೇಶಿಕ ವಿಜ್ಞಾನ ಕೇಂದ್ರ ವಿನಂತಿಸಿದೆ.