ಪುತ್ತೂರು: ಲೈವ್ ವೀಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಬ್ಯಾರಿ ಭಾಷೆಯಲ್ಲಿ ಲೈವ್ ವೀಡಿಯೋ ಮಾಡಿ ನೇಣಿಗೆ ಶರಣಾಗುತ್ತೇನೆ ಎಂದಿದ್ದ ನಾಸಿರ್ ಬಳಿಕ ನೇಣಿಗೆ ಶರಣಾಗದೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಲೈವ್ ವೀಡಿಯೋ ಮಾಡಿ ಕೃತ್ಯಕ್ಕೆ ಕಾರಣ ಹೇಳಿರುವ ನಾಸಿರ್ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ, ಅಲ್ಲಿನ ಕುಟುಂಬದ ಹುಡುಗಿಯೊಂದಿಗೆ ಸಂಬಂಧ ಇದೆಯೆಂದು ಹೇಳಿ ಅದ್ರಾಮ ಅವರು ಮನೆಗೆ ಕರೆದು ನಾಲ್ವರ ಜೊತೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನಗೆ ಅಲ್ಲಿನ ಯಾವುದೇ ಹುಡುಗಿ ಜೊತೆಗೂ ಸಂಬಂಧ ಇಲ್ಲ. ಅವರು ಹೇಳಿರುವ ಹುಡುಗಿಯ ಗಂಡನೇ ಈ ಕಾರಿನಲ್ಲಿದ್ದಾನೆ ಎಂದು ಹೇಳಿ ಜೊತೆಗಿದ್ದ ನಾಲ್ವರನ್ನ ತೋರಿಸಿ, ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ. ನಾನು ಈಗ ಪುತ್ತೂರಿಗೆ ಹೋಗಿ ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಿ ವೀಡಿಯೋ ಕಟ್ ಮಾಡಿದ್ದಾನೆ. ಆದ್ರೆ ನಾಸಿರ್ ನೇಣಿಗೆ ಶರಣಾಗದೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.