ಮಂಗಳೂರು: ತಾನೊಬ್ಬ ಪೊಲೀಸ್ ಅಧಿಕಾರಿಯೆಂದು ಬಿಂಬಿಸಿ ವಂಚನೆಗೆತ್ನಿಸುತ್ತಿದ್ದ ನಗರದ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ, ಇಡುಕ್ಕಿ ಜಿಲ್ಲೆಯ ಅಂಬಚ್ಚಾಲ್, ಪಳ್ಳಿವಾಸಿಲ್ ನಿವಾಸಿ, ನರ್ಸಿಂಗ್ ವಿದ್ಯಾರ್ಥಿ ಬೆನೆಡಿಕ್ಟ್ ಸಾಬು (22) ಎಂಬಾತ ಬಂಧಿತ ಆರೋಪಿ. ಆರೋಪಿ ಬಳಿಯಿಂದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್, ಕೇರಳ ಸ್ಟೇಟ್ ಪೊಲೀಸ್ ಮತ್ತು ಅಗ್ರಿಕಲ್ಟರ್ ಡಿಪಾರ್ಟೆಂಟ್ ಅಂಡ್ ಫಾರ್ಮರ್ಸ್ ವೆಲ್ಫೇರ್ ಡಿಪಾರ್ಟೆಂಟ್ ಕೇರಳ ಹೆಸರಿನಲ್ಲಿ ನಕಲಿ ಐಡಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ಪಿಎಸ್‌ಐ ಸಮವಸ್ತ್ರ, ಪೊಲೀಸ್ ಲೋಗೊ, ಮೆಡಲ್, ಬೆಲ್ಟ್ ಕ್ಯಾಪ್, ಒಂದು ಲ್ಯಾಪ್‌ಟಾಪ್, ಎರಡು ಮೊಬೈಲ್ ಸೆಟ್‌ಗಳನ್ನು ವಶಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಲೇಜಿನಲ್ಲಿ ಜಾಗೃತಿ ಕಾರ್ಯಾಗಾರ ನಡೆಸುತ್ತಿದ್ದಾಗ ವಿದ್ಯಾರ್ಥಿಗಳು ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ ವಂಚನೆಗೆ ಒಳಗಾದವರಿದ್ದರೆ, ಉರ್ವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮನವಿ ಮಾಡಿದ್ದಾರೆ.