ಪುತ್ತೂರು: ರಾಜ್ಯ ಸರಕಾರದ ಗೃಹಜ್ಯೋತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಪುರಭವನದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಆದ್ದರಿಂದ ಜನರು ಇದರ ಫಲಾನುಭವಿಗಳಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಬಾಕಿ ಇರುವ ಶೇ. 21ನ್ನು ಅತೀ ಶೀಘ್ರದಲ್ಲಿ ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದ ದಿನದಂದು ಗೃಹಲಕ್ಷ್ಮೀ ಯೋಜನೆ ಜಾರಿಗೆ ಬರಲಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಶದಲ್ಲೇ ಯಾರೂ ನೀಡಲಿಲ್ಲ. ಪ್ರತಿಯೊಂದು ಮನೆಗೆ, ಪ್ರತಿಯೊಬ್ಬ ವ್ಯಕ್ತಿಗೂ ಪ್ರಯೋಜನ ಆಗುವಂತಹ ಯೋಜನೆ. ಜನರ ಹಣವನ್ನು ಜನರಿಗೆ ನೀಡುವ ಮೂಲಕ ಜನರಿಗೆ ಶಕ್ತಿಯನ್ನು ನೀಡುವ ಕೆಲಸ ಮಾಡಿದ್ದೇವೆ ಎಂದರು.
ರಾಜ್ಯ ದಿವಾಳಿ ಆಗುತ್ತದೆ ಎಂದು ಟೀಕೆ ಮಾಡಲು ಶುರು ಮಾಡಿದರು. ಇಂದು ಎಲ್ಲಾ ಟೀಕೆಗಳಿಗೆ ನಾವು ಕೆಲಸದಿಂದ ಉತ್ತರ ನೀಡಿದ್ದೇವೆ. ಪ್ರಧಾನಿಯೂ ಟೀಕೆ ಮಾಡಿದರು. ಅದೇನಿದ್ದರೂ ಕಾಂಗ್ರೆಸ್ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ 12 ಲಕ್ಷ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ನಮ್ಮನ್ನು ಟೀಕೆ ಮಾಡುವ ಬಿಜೆಪಿ ಸರಕಾರ ಕೇವಲ 3-4 ಲಕ್ಷ ಮನೆಗಳನ್ನಷ್ಟೇ ನಿರ್ಮಿಸಿದೆ. ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎನ್ನುವುದು ಇದರಿಂದ ಸಾಬಿತಾಗಿದೆ ಎಂದರು.
ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಂ.ಆರ್.ಐ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಾಕಿಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಇಲ್ಲದೇ ಹೋದರೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಮದ್ಯವರ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬಾರದು. ಒಟ್ಟಿನಲ್ಲಿ ಜನರಿಗೆ ಕಿರುಕುಳ, ತೊಂದರೆ ಆಗಬಾರದು. ಅಂತಹ ಉತ್ತಮ ಆಡಳಿತವನ್ನು ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ನೀಡಬೇಕು. ಆಡಳಿತದಲ್ಲಿ ಶಿಸ್ತುಬದ್ಧವಾಗಿರಬೇಕು. ಆಗ ಜನರಿಗೆ ಪ್ರಯೋಜನ ಆಗುತ್ತದೆ. ಆಡಳಿತದಲ್ಲಿ ದ.ಕ. ನಂಬರ್ ವನ್ ಆಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಪಂ ಸಿಇಓ ಡಾ. ಆನಂದ ಕೆ., ಎಎಸ್ಪಿ ಧರ್ಮೆಂದ್ರ, ಸಹಾಯಕ ಆಯುಕ್ತ ಗಿರೀಶ್ ನಂದನ್, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ. ಉಪಸ್ಥಿತರಿದ್ದರು. ಮಂ.ವಿ.ಸ.ಕಂ. ತಾಂತ್ರಿಕ ನಿರ್ದೇಶಕ ಹೆಚ್.ಜಿ. ರಮೇಶ್ ಸ್ವಾಗತಿಸಿ, ಮೆಸ್ಕಾಂ ಮುಖ್ಯ ಇಂಜಿನಿಯರ್ ಪುಷ್ಪ ಎಸ್.ಎ. ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.