ಪುತ್ತೂರು: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಅರುಣ್ ಕುಮಾರ್ ಪುತ್ತಿಲ ಟೀಂ ನಲ್ಲಿ ಬಿರುಕು ಕಾಣಿಸಿಕೊಂಡಿಸಿರುವ ಲಕ್ಷಣಗಳು ಗೋಚರಿಸುತ್ತಿವೆ.ಹೌದು, ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಪುತ್ತಿಲ ಟಿಕೆಟ್ ಮಿಸ್ ಆದ ಬಳಿಕ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ ಪುತ್ತಿಲ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪರನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದರು. ಸ್ವಲ್ಪ ಅಂತರದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಅದಾದ ಬಳಿಕ ಅರುಣ್ ಪುತ್ತಿಲ ಯುವ ಹಿಂದೂಪಡೆ ‘ಪುತ್ತಿಲ ಪರಿವಾರ’ ಕಟ್ಟಿ ರಾಜಕೀಯವಾಗಿ ಹೊಸ ಅಲೆ ಎಬ್ಬಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದ.ಕ ಕ್ಷೇತ್ರದ ಟಿಕೆಟ್ ಗಾಗಿ ಕೂಗು ಕೂಡಾ ಪುತ್ತಿಲ ಪರಿವಾರದಿಂದ ಕೇಳಿಬಂದಿದೆ. ಈ ನಡುವೆ ಸೌಜನ್ಯ ಪ್ರಕರಣ ಪುತ್ತಿಲ ಪಡೆಗೆ ಮುಳುವಾಗಿ ಪರಿಣಮಿಸಿದೆ.
ಅತ್ತ ಉಗುಳಲೂ ಅಲ್ಲದ ಇತ್ತ ನುಂಗಲೂ ಆಗದ ಸ್ಥಿತಿಯಲ್ಲಿ ಸೌಜನ್ಯ ಪ್ರಕರಣ ಪುತ್ತಿಲ ಪರಿವಾರವನ್ನು ಬಾಧಿಸುತ್ತಿದೆ. ಅರುಣ್ ಪುತ್ತಿಲ ಸೌಜನ್ಯ ಪ್ರಕರಣದಲ್ಲಿ ಮೌನವಹಿಸಿರುವುದು ಪರಿವಾರದ ಯುವಕರಲ್ಲಿ ಮುನಿಸಿಗೆ ಕಾರಣವಾಗಿದೆ. ಕೆಲ ಯುವಕರು ಈಗಾಗಲೇ ತಮ್ಮ ಆಕ್ರೋಶವನ್ನು ಬಹಿರಂಗವಾಗಿ ಹೊರಹಾಕಿದ್ದು, ಹಿಂದುತ್ವ ಕೇವಲ ಚುನಾವಣೆಗೆ ಮಾತ್ರವೇ ಸೀಮಿತವಾಯಿತೇ ಎಂದು ಪ್ರಶ್ನಿಸುತ್ತಿರುವುದಾಗಿ ತಿಳಿದುಬಂದಿದೆ.ಪರಿವಾರದ ಯುವಕರ ಒತ್ತಡಕ್ಕೆ ಮಣಿದು ಆ.14 ರಂದು ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಹಾಗೂ ಹಕ್ಕೊತ್ತಾಯ ಸಭೆಯನ್ನು ಪುತ್ತೂರಿನಲ್ಲಿ ನಡೆಸಲು ಅರುಣ್ ಕುಮಾರ್ ಅವರ ‘ಪುತ್ತಿಲ ಪರಿವಾರ’ ನಿರ್ಧರಿಸಿದ್ದರೂ ಇದು ಮೇಲ್ನೋಟದ ಹೋರಾಟ ಎನ್ನಲಾಗುತ್ತಿದೆ. ಅನ್ಯಾಯದ ವಿರುದ್ದ ಮೃದು ಧೋರಣೆ ತಳೆದ ಪುತ್ತಿಲರ ವರ್ತನೆಯಿಂದ ಅವರ ಬಳಗದಲ್ಲಿ ಬಿರುಕು ಮೂಡಿರುವುದು ಸುಳ್ಳಲ್ಲ.