ಬೆಂಗಳೂರು : ಸಂಬಂಧಿಕರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತಪಟ್ಟ ಸ್ಪಂದನ ಅವರ ಮೃತ ದೇಹವನ್ನ ನಿನ್ನೆ ಬೆಂಗಳೂರಿಗೆ ತರಲಾಗಿತ್ತು. ಇಂದು ಬೆಂಗಳೂರಿನ ಶ್ರೀರಾಂಪುರದ ಹರೀಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅವರು ಪಂಚಭೂತಗಳಲ್ಲಿ ಲೀನವಾದರು.
ಶ್ರೀರಾಮಪುರದ ಹರೀಶ್ಚಂದ್ರ ಘಾಟ್ ವರೆಗೆ ಸ್ಪಂದನ ಅವರ ಅಂತಿಮ ಯಾತ್ರೆ ಆಗಮಿಸಿದ ನಂತರ ಈ ವೇಳೆ ಪುತ್ರ ಶೌರ್ಯ ವಿಧಿ ವಿಧಾನಗಳ ಪ್ರಕಾರ ಮಡಿಕೆಯನ್ನು ಹೊತ್ತು ಅವರ ತಾಯಿಯ ಮೃತದೇಹದ ಸುತ್ತ ಮೂರು ಸುತ್ತು ಹಾಕಿದ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಾನ ಈ ವೇಳೆ ಪುತ್ರ ಶೌರ್ಯನಿಗೆ ತಂದೆ ವಿಜಯ್ ರಾಘವೇಂದ್ರ ಅವರು ಸಹಕರಿಸಿದರು.ನಂತರ ವಿದ್ಯುತ್ ಚಿತಾಗರದತ್ತ ಅವರ ದೇಹವನ್ನು ತೆಗೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಅಂತಿಮವಾಗಿ ದರ್ಶನ ಪಡೆದರು. ಅಂತಿಮ ವಿಧಿ ವಿಧಾನಗಳನ್ನು ಪತಿ ಹಾಗು ನಟ ವಿಜಯರಾಘವೇಂದ್ರ ಹಾಗೂ ಪುತ್ರ ಶೌರ್ಯ ನೆರವೇರಿಸಿ ಅವರ ಮೃತ ದೇಹಕ್ಕೆ ಅಗ್ನಿಸ್ಪರ್ಶ ನೀಡಿದರು. ತಂದೆ ಶಿವರಾಂ, ಚಿಕ್ಕಪ್ಪ ಬಿಕೆ ಹರಿಪ್ರಸಾದ್, ಮಾವ ಚಿನ್ನೇಗೌಡರು, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ಮೈದುನ ಶ್ರೀ ಮುರಳಿ, ಸೇರಿದಂತೆ, ಕನ್ನಡ ಚಿತ್ರರಂಗದ ಎಲ್ಲಾ ಹಿರಿಯ-ಕಿರಿಯ ಕಲಾವಿದರು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ದುಃಖದ ಮಡುವಿನಲ್ಲಿ ಇದಿದ್ದು ಕಂಡು ಬಂದಿತು.