
ಬೆಂಗಳೂರು: ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಬಿಜೆಪಿಯಿಂದ ಮಹತ್ವದ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಇದರ ಸಲುವಾಗಿ ಇದೀಗ ರಾಷ್ಟ್ರೀಯ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.



ಆದ್ರೇ ಹೀಗೆ ಮಾಡಿದ್ದರ ಹಿಂದೆ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ಎನ್ನಲಾಗುತ್ತಿದೆ.

2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ತನ್ನ ಸಾಂಸ್ಥಿಕ ಪುನರ್ ರಚನೆಯನ್ನು ಮುಂದುವರೆಸಿದೆ. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇಂದ್ರ ಪದಾಧಿಕಾರಿಗಳ ತಂಡವನ್ನು ಬದಲಾಯಿಸಿದ್ದಾರೆ. ಹೊಸ ಪಟ್ಟಿಯಲ್ಲಿ 13 ಉಪಾಧ್ಯಕ್ಷರು ಮತ್ತು 9 ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ.
ತೆಲಂಗಾಣ ಬಿಜೆಪಿ ಮಾಜಿ ಅಧ್ಯಕ್ಷ ಬಂಡಿ ಸಂಜಯ್ ಮತ್ತು ರಾಜ್ಯಸಭಾ ಸಂಸದ ರಾಧಾ ಮೋಹನ್ ಅಗರ್ವಾಲ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ಎಂಎಲ್ಸಿ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪಾಸ್ಮಾಂಡಾ ಮುಸ್ಲಿಂ ತಾರಿಕ್ ಮನ್ಸೂರ್ ಅವರನ್ನು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ಆಂಟನಿ ಅವರ ಪುತ್ರ ಅನಿಲ್ ಆಂಟನಿ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇರಿಸಿಕೊಳ್ಳಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಮತ್ತು ದಿಲೀಪ್ ಸೈಕಿಯಾ ಅವರನ್ನು ಬಿಜೆಪಿ ತನ್ನ ಪ್ರಧಾನ ಕಾರ್ಯದರ್ಶಿಗಳಿಂದ ಕೈಬಿಟ್ಟಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರೂ ನಾಯಕರಿಗೆ ಟಿಕೆಟ್ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಾಜಿ ಶಾಸಕ ಸಿ.ಟಿ ರವಿ ಅವರಿಗೆ ಕೋಕ್ ನೀಡಿದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡೋದು ಫಿಕ್ಸ್ ಎನ್ನಲಾಗುತ್ತಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.