ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಗ್ಯಾರಂಟಿಯಡಿ ಮೊದಲ ತಿಂಗಳು ಸುಮಾರು ಶೇ. 60ರಷ್ಟು ಗ್ರಾಹಕರು ಫಲಾನುಭವಿಗಳಾಗುವ ನಿರೀಕ್ಷೆ ಇದೆ. ಉಳಿದವರು ಈಗಲೂ ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ನೀಡಿದ ಮಾಹಿತಿ ಪ್ರಕಾರ, 1.92 ಕೋಟಿ ಗೃಹ ಬಳಕೆದಾರರಿದ್ದು, ಇದರಲ್ಲಿ ಶೇ. 90ಕ್ಕೂ ಅಧಿಕ ಜನ ಮಾಸಿಕ ಸರಾಸರಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಾಗಿದ್ದಾರೆ. ಈ ಪೈಕಿ ಇದುವರೆಗೆ ಅಂದಾಜು 1.18ರಿಂದ 1.20 ಕೋಟಿ ಮಂದಿ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದವರು ಇನ್ನೂ ನೋಂದಣಿ ಮಾಡಿ ಕೊಂಡಿಲ್ಲ.
ಇನ್ನೂ ಇದೆ ಅವಕಾಶ
ಮೊದಲ ತಿಂಗಳ ಫಲಾನುಭವಿಗಳಾಗಲು ಮಂಗಳವಾರ, ಜು. 25 ಕೊನೆಯ ದಿನವಾಗಿದೆ. ನೋಂದಣಿ ಮಾಡಿಸಿಕೊಳ್ಳದವರು ಯೋಜನೆ ಅಡಿ ಫಲಾನುಭವಿಗಳಾಗಲು ಒಂದು ತಿಂಗಳು ಕಾಯುವುದು ಅನಿವಾರ್ಯವಾಗಿದ್ದು, ಸೆಪ್ಟಂಬರ್‌ನಲ್ಲಿ ಇದರ ಲಾಭ ಪಡೆಯಲು ಅವಕಾಶ ಇದೆ. ಅರ್ಜಿ ಸಲ್ಲಿಕೆಗೆ ಸರಕಾರ ಯಾವುದೇ ಕೊನೇ ದಿನಾಂಕ ನಿಗದಿಪಡಿಸಿಲ್ಲ.