ಬೆಂಗಳೂರು: ನಂದಿನಿ ಹಾಲಿನ ದರ ಲೀಟರ್ ಒಂದಕ್ಕೆ 3 ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ ಅಧ್ಯಕ್ಷರ ಸಭೆಯ ಬಳಿಕ ಕೆಎಂಎಫ್ ನಿರ್ದೇಶಕ ಎಚ್.ಡಿ.ರೇವಣ್ಣ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ನಿರ್ಣಯ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
‘ಹಾಲಿನ ದರ ಲೀಟರ್‌ಗೆ 5 ಹೆಚ್ಚಿಸಲು ನಾವು ಬೇಡಿಕೆ ಸಲ್ಲಿಸಿದ್ದೆವು. ಅದಕ್ಕೆ ಮುಖ್ಯಮಂತ್ರಿ ಒಪ್ಪಿಕೊಳ್ಳಲಿಲ್ಲ’ ಎಂದು ರೇವಣ್ಣ ಹೇಳಿದರು. ‘ಲೀಟರ್‌ಗೆ 8 ಹೆಚ್ಚಿಸಬೇಕು ಎಂದು ಹಾಲು ಒಕ್ಕೂಟಗಳು ಆರಂಭದಲ್ಲಿ ಹೇಳಿದಾಗ ಯಾವುದೇ ಕಾರಣಕ್ಕೂ ಹಾಲಿನ ದರ ಏರಿಕೆ ಮಾಡುವುದು ಬೇಡ. ಇದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಂಸ್ಥೆಗಳು ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಒಕ್ಕೂಟಗಳ ಪ್ರತಿನಿಧಿಗಳು ಮುಖ್ಯಮಂತ್ರಿಯವರಿಗೆ ಮನದಟ್ಟು ಮಾಡುವ ಪ್ರಯತ್ನ ನಡೆಸಿದರು’ ಎಂದು ಮೂಲಗಳು ಹೇಳಿವೆ.
‘ಹೆಚ್ಚಿಸಿದ ಹಾಲಿನ ದರ ನೇರವಾಗಿ ರೈತರಿಗೆ ಹೋಗಬೇಕು. ಒಕ್ಕೂಟಗಳ ನಷ್ಟವನ್ನು ತುಂಬಿಕೊಳ್ಳಲು ಬಳಸಿಕೊಳ್ಳಬೇಡಿ. ಆ ರೀತಿಯಾದರೆ ಮಾತ್ರ ಒಪ್ಪಿಗೆ ನೀಡುತ್ತೇನೆ. ಒಕ್ಕೂಟಗಳು ನಷ್ಟಕ್ಕೆ ಒಳಗಾದರೆ ಆಡಳಿತಾಧಿಕಾರಿ ನೇಮಿಸುವುದಾಗಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು’ ಎಂದು ಮೂಲಗಳು ತಿಳಿಸಿವೆ.