ಪುತ್ತೂರು : ಕಾರು ಓವರ್ ಟೆಕ್ ಮಾಡುವ ವಿಚಾರದಲ್ಲಿ ಇಬ್ಬರು ಚಾಲಕರ ನಡುವೆ ಮನಸ್ತಾಪ ಉಂಟಾಗಿ ಒಬ್ಬ ಕಾರು ಚಾಲಕ ಇನ್ನೊಬ್ಬ ಕಾರು ಚಾಲಕನಿಗೆ ಕಪಾಳಮೋಕ್ಷ ಮಾಡಿರುವುದಾಗಿ ಪುತ್ತೂರು ನಗರ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಪುತ್ತೂರು ಹೊರ ವಲಯದ ನೆಹರು ನಗರ ಸಮೀಪದ ಕಲ್ಲೇಗ ಬಳಿಯ ಅಭಿಷೇಕ್ ಎಂಬವರು ದೂರು ನೀಡಿದವರು.
ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪ್ರದೀಪ್ ರೈ ಪಾಂಬಾರು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರದೀಪ್ ಹಾಗೂ ಅಭೀಷೇಕ್ ಚಲಾಯಿಸುತ್ತಿದ್ದ ಎರಡು ಪ್ರತ್ಯೇಕ ಕಾರುಗಳು ಪುತ್ತೂರು ಕಡೆಯಿಂದ ಮುರ ಕಡೆಗೆ ಚಲಿಸುತ್ತಿದ್ದ ವೇಳೆ ಓವರ್ ಟೆಕ್ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಈ ಸಂದರ್ಭ ಪ್ರದೀಪ್ ರೈ ಯವರು ಅಭಿಷೇಕ್ ರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರ ಮುಂದುವರಿದ ಭಾಗವಾಗಿ ಅಭಿಷೇಕ್ ಸ್ನೇಹಿತರು ಪುತ್ತೂರಿನ ಬೋಳ್ವಾರ್ ಬಳಿ ಪ್ರದೀಪ್ ರೈ ಕಾರನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿಯಾಗಿರುವ ಪ್ರದೀಪ್ ರೈ ಪಾಂಬಾರು ಅವರು ನಿನ್ನೆ (ಬುಧವಾರ) ಪುತ್ತೂರಿನ ಖಾಸಗಿ ಆಸ್ಫತ್ರೆಗೆ ದಾಖಲಾಗಿದ್ದು, ಬೋಳ್ವಾರಿನ ಪ್ರಗತಿ ಆಸ್ಫತ್ರೆ ಬಳಿ ಮತ್ತು ಬೈಪಾಸ್ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ದರೋಡೆ ಮಾಡಿರುವುದಾಗಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.
ರಸ್ತೆಯಲ್ಲಿ ನಡೆದ ಕ್ಷುಲ್ಲಕ ಘಟನೆ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದ್ದು, ಇದೀಗ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಕೊಂಡಿರುವ ಪ್ರದೀಪ್ ರೈಯವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಪ್ತ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗುತ್ತಿದೆ. ಇನ್ನೊಂದೆಡೆ ಅಭಿಷೇಕ್ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಕೃತ್ಯವನ್ನು ಖಂಡಿಸಿರುವ ಪುತ್ತೂರು ಬಿಜೆಪಿ ಮುಖಂಡರಾದ ಸಂಜೀವ ಮಠಂದೂರು, ಜೀವಂಧರ್ ಜೈನ್ ಮತ್ತಿತ್ತರರು ಸೂಕ್ತ ಕ್ರಮಕ್ಕಾಗಿ ಅಗ್ರಹಿಸಿದ್ದಾರೆ. ಅಲ್ಲದೆ, ಅಭಿಷೇಕ್ ದಾಖಲಾಗಿರುವ ಆಸ್ಫತ್ರೆಗೆ ಈ ಮುಖಂಡರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.