ಮಂಗಳೂರು: ದೇವಸ್ಥಾನಕ್ಕೋ, ಊರಜಾತ್ರೆ, ಜನಜಂಗುಳಿ ಇರುವಲ್ಲಿ ಚಪ್ಪಲ್ ಕಳವಾಗೋದು ಮಾಮೂಲಿ. ಯಾರೋ ಕಳಚಿಟ್ಟ ಚಪ್ಪಲಿ ಇನ್ಯಾರೋದು ಕಾಲುಸೇರಿ ಕ್ಷಣಮಾತ್ರದಲ್ಲಿ ಚಪ್ಪಲಿ ನಾಪತ್ತೆಯಾಗುತ್ತದೆ. ವಾರಸುದಾರರು ತಮ್ಮ ಚಪ್ಪಲಿ ಹುಡುಕಾಡಿ ಹುಡುಕಾಡಿ ಸಿಗದೆ ಬೇಸತ್ತು ಕೊನೆಗೆ ಬರಿಗಾಲಲ್ಲೇ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ತನ್ನ ಚಪ್ಪಲಿ ಕಳುವಾಗಿದೆ ಎಂದು 112ಗೆ ಕರೆ ಮಾಡಿ ಪೊಲೀಸ್ ಕರೆಸಿ ಹುಡುಕಾಡುವಂತೆ ಮಾಡಿದ್ದಾನೆ. ಹೌದು… ಈ ಘಟನೆ ನಡೆದದ್ದು ಮಂಗಳೂರಿನ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಸಭಾಂಗಣದಲ್ಲಿ. ಮೊನ್ನೆ ರವಿವಾರ ಇಲ್ಲಿ ಸಾವಯವ ಕೃಷಿ, ಉತ್ಪನ್ನಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವಿತ್ತು. ಆದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಹಾಗೆ ಅಲ್ಲಿಗೆ ಬಂದಿರುವವರೊಬ್ಬರ ಚಪ್ಪಲಿ ಕಾಣೆಯಾಗಿದೆ. ಅವರು ಹುಡುಕಾಟ ನಡೆಸಿ ಚಪ್ಪಲಿ ಕಾಣದಿದ್ದಾಗ 112ಗೆ ಕರೆ ಮಾಡಿದ್ದಾರೆ. ಅದರಂತೆ ದೂರು ಪರಿಶೀಲನೆ ನಡೆಸುವಂತೆ ಬಂದರು ಠಾಣೆಗೆ ಸಂದೇಶ ಬಂದಿದೆ. ಅದರಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಚಪ್ಪಲಿ ಹುಡುಕಾಟಕ್ಕೆ ಬಾಳಂಭಟ್ ಹಾಲ್ ಗೆ ಬಂದಿದ್ದಾರೆ. ಚಪ್ಪಲಿ ಕಳೆದುಕೊಂಡಿರುವ ವ್ಯಕ್ತಿ ತನ್ನ ಚಪ್ಪಲಿಯನ್ನು ಯಾರೋ ಹಾಕಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾನೆ. ತಕ್ಷಣ ಪೊಲೀಸರು ಬಾಳಂಭಟ್ ಸಭಾಂಗಣದ ಮುಂಭಾಗದ ಸಿಸಿಕ್ಯಾಮರಾವನ್ನು ಪರಿಶೀಲನೆ ನಡೆಸಿದಾಗ ಯುವಕನೊಬ್ಬ ಆ ಚಪ್ಪಲಿ ಹಾಕಿಕೊಂಡು ಹೋಗಿರೋದು ಪತ್ತೆಯಾಗಿದೆ. ಈ ವೇಳೆ ಚಪ್ಪಲಿ ಕಳೆದುಕೊಂಡವರನ್ನು ಬಂದರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲು ಹೇಳಿದಾಗ ಅವರು ಅದಕ್ಕೆ ನಿರಾಕರಿಸಿದ್ದಾರೆ. ಆ ಬಳಿಕ ಪೊಲೀಸರು ಅಲ್ಲಿಂದ ಮರಳಿದ್ದಾರೆ. ಆದರೆ ಚಪ್ಪಲಿ ಕಳವಿನಂತಹ ಸಣ್ಣ ಪುಟ್ಟ ವಿಚಾರಕ್ಕೂ ಪೊಲೀಸ್ ಸ್ಪಂದನೆ ನಿಜಕ್ಕೂ ಮೆಚ್ಚುವಂತದ್ದೇ.