ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಕೃಷ್ಣಪ್ಪ ಜಿ. ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದ ಘಟನೆ ಜು.14ರಂದು ನಡೆದಿದೆ.ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ಉಚ್ವಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ ಜಿ. ಬಣದವರ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.ಸಭೆ ಮಾತಿನ ಚಕಮಕಿ ಮೂಲಕವೇ ಪ್ರಾರಂಭವಾಗಿದ್ದು ಸ್ವತಃ ಕೃಷ್ಣಪ್ಪ ಅವರೇ ಉಚ್ವಾಟಿತ ಸದಸ್ಯರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದಿರಿ, ನಿಮಗೆ ಮಾನ ಮರ್ಯಾದಿ ಇಲ್ಲವೇ ಎಂದು ರೇಗಿಸಿದ್ದಾರೆ. ಬಳಿಕ ಮುಖಂಡರೋರ್ವರು ಸಭೆಯಲ್ಲಿ ಪ್ರಶ್ನಿಸಿ. ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಇರಲು ಅವಕಾಶ ಇದೆಯೇ ಎಂದು ಪ್ರಶ್ನಿಸಿದ್ದು ಅಲ್ಲಿಂದ ಪ್ರಾರಂಭವಾದ ಮಾತಿನ ಚಕಮಕಿ ನೂಕಾಟ, ತಳ್ಳಾಟ, ಹಲ್ಲೆ ನಡೆಯುವ ತನಕ ತಲುಪಿ ಪೋಲಿಸರ ಮಧ್ಯಪ್ರವೇಶದ ಬಳಿಕ ತಣ್ಣಗಾದ ಘಟನೆ ನಡೆಯಿತು. ಕೃಷ್ಣಪ್ಪ ಬಣದ ಮೂರು ನಾಲ್ಕು ಮಂದಿ ಮುಖಂಡರು ನಂದ ಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆಸಿದ ಆರೋಪವೂ ವ್ಯಕ್ತವಾಗಿದ್ದು, ಮಾರಾಮಾರಿ ನಡೆದಿರುವ ವೀಡಿಯೋಗಳು ಲಭ್ಯವಾಗಿದೆ.ನಂದಕುಮಾರ್ ಬಣದ ಸಾಮಾಜಿಕ ತಾಣ ನಿರ್ವಹಣೆ ಮಾಡಿದ ಮುಖಂಡರೋರ್ವರನ್ನು ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಸೋಲಿನ ಪರಾಮರ್ಶೆ ಸಭೆಯು ರಣಾಂಗಣವಾದ ಸನ್ನಿವೇಶ ನಡೆದಿರುವುದು. ಮುಂದೆ ಉಭಯ ಬಣಗಳ ವೈಮನಸ್ಯ ಯಾವ ರೀತಿಯಲ್ಲಿ ಕೊನೆಯಾಗಬಹುದು ಎಂಬ ಕುತೂಹಲ ಪ್ರಾರಂಭವಾಗಿದೆ.