ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ ಬರಲಿದೆ. ಒಂದು ಜುಲೈ 17 ಮತ್ತೊಂದು ಆಗಸ್ಟ್ 16. ಮೊದಲನೆಯದ್ದು ಆಷಾಢಮಾಸದ ಅಮಾವಾಸ್ಯೆ. ಎರಡನೆಯದ್ದು ಅಧಿಕ ಶ್ರಾವಣಮಾಸದ ಅಮಾವಾಸ್ಯೆ. ಹಾಗಿರುವಾಗ ಯಾವ ಅಮಾವಾಸ್ಯೆಯನ್ನು ಆಟಿಅಮಾವಾಸ್ಯೆ ಎಂದು ಆಚರಿಸಬೇಕೆಂಬ ಗೊಂದಲ ಹಲವರಿಗೆ ಇದೆ.
ವಸ್ತುತಸ್ತು ಆಟಿ ಅಮಾವಾಸ್ಯೆ ಎನ್ನುವ ದಿನವನ್ನು ಶ್ಸದ್ಧೆಯಿಂದ ಆಚರಿಸುವ ಕ್ರಮ ಪ್ರಾದೇಶಿಕವಾದದ್ದು. ನಮ್ಮ ಊರಲ್ಲಿ ಇರುವಂತಹ ಕ್ರಮ. ಇಂತಹ ಸಂದರ್ಭದಲ್ಲಿ ಕೆಲವು ಹಬ್ನಗಳನ್ನು ಎರಡೂ ದಿನಗಳಲ್ಲಿ ಆಚರಿಸುವ ಕ್ರಮ ಇದೆ .
ಆದರೆ ಅಟಿ ಅಮಾವಾಸ್ಯೆಯ ದಿನ ಮದ್ದು ಕುಡಿಯುವ ಸಂಪ್ರದಾಯವಿದೆ. ಅದೇ ಪ್ರಧಾನ ಆಚರಣೆಯೂ ಆಗಿದೆ. ಅದು ಹುಳಗಳನ್ನು ಕೊಲ್ಲುವುದಕ್ಕಾಗಿ ಇರುವ ಮದ್ದು ಇಂತಹ ಆರೋಗ್ಯದ ಉದ್ದೇಶಕ್ಕಾಗಿ ಉಪಯೋಗವಾಗುವ ಮದ್ದನ್ನು ವರ್ಷಕ್ಕೊಂದೇ ದಿನ ಕುಡಿಯುವುದು ಸಂಪ್ರದಾಯ ಮತ್ತು ಆರೋಗ್ಯಕರವೂ ಹೌದು. ಮೇಲಾಗಿ ಅದು ಪಾಲೆಯ ಮರದ ಕೆತ್ತೆಯಿಂದ ತೆಗೆಯುವ ಮದ್ದು ಆ ಮರದ ಸಂಖ್ಯೆಯೂ ಕಡಿಮೆ ಇರುವ ಕಾರಣ ಎರಡೆರಡು ಭಾರಿ ಅದರ ಕೆತ್ತೆ ತೆಗೆದರೆ ಮರಕ್ಕೂ ತೊಂದರೆಯಾಗಬಹುದು. ಮದ್ದು ತುಂಬ ಉಷ್ಣವಾದ ಕಾರಣವೂ ಎರಡೆರಡು ದಿನ ಕುಡಿಯುವುದು ಸಮಂಜಸವಲ್ಲ. ಈ ಎಲ್ಲ ದೃಷ್ಟಿಯಿಂದ ಇದರ ಆಚರಣೆಯ ದಿನ ಒಂದೇ ಆದರೆ ಸೂಕ್ತ. ಆದ್ದರಿಂದ ಯಾವ ದಿನ ಒಳ್ಳೆಯದು ಎಂದು ಯೋಚಿಸಬೇಕು.
ಅಧಿಕಮಾಸವನ್ನು ಮಲಮಾಸ ಎನ್ನುವುದಾಗಿ ಕರೆಯುವುದು ಒಂದು ಮತ.ಆದ್ದರಿಂದ ಅಧಿಕಶ್ರಾವಣದ ಎರಡನೆಯ ಅಮಾವಾಸ್ಯೆ ಮೊದಲ ಅಮಾವಾಸ್ಯೆಯಷ್ಟು ಸೂಕ್ತವಲ್ಲದ ದಿನ ಅಲ್ಲ. ಈ ಎಲ್ಲ ಕಾರಣದಿಂದ ವಿದ್ವಾಂಸರು ಅಭಿಪ್ರಾಯಪಟ್ಟಂತೆ ಮೊದಲ ಆಟಿ ಅಮಾವಾಸ್ಯೆ ಅಂದರೆ ಜುಲೈ 17 ರಂದೇ ಆಟಿ ಅಮಾವಾಸ್ಯೆ ಆಚರಿಸುವುದು ಸೂಕ್ತ . ಪಲಿಮಾರು ಮಠದ ಪಂಚಾಂಗದಲ್ಲಿಯೂ ಈ ದಿನವನ್ನೇ ಆಟಿ ಅಮಾವಾಸ್ಯೆ ಎಂದು ಬರೆದಿದ್ದಾರೆ
ಆದ್ದರಿಂದ ಒಂದನೇ ಅಮಾವಾಸ್ಯೆ ಅಂದರೆ ಜುಲೈ 17 ರಂದೇ ಆಟಿ ಅಮಾವಾಸ್ಯೆ ಯಾಗಿ ಆಚರಿಸುವುದು ಸರಿಯಾದ ಕ್ರಮ.