Home ಕರಾವಳಿ ಪೊಲೀಸ್ ಠಾಣೆಯಲ್ಲಿ ಕೋವಿ ಅಡಮಾನಿಗೆ ಡೆಫಾಸಿಟ್ ಇಡುವಂತಿಲ್ಲ

ಪೊಲೀಸ್ ಠಾಣೆಯಲ್ಲಿ ಕೋವಿ ಅಡಮಾನಿಗೆ ಡೆಫಾಸಿಟ್ ಇಡುವಂತಿಲ್ಲ

0

ಪುತ್ತೂರು: ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆಯ ಪ್ರಕಾರ ರೈತರು ತಮ್ಮ ಬಂದೂಕುಗಳನ್ನು ಪೊಲೀಸ್ ಠಾಣೆಯಲ್ಲಿ ಡೆಫಾಸಿಟ್ ಇಡಬೇಕಾಗುತ್ತದೆ. ವರ್ಷದಲ್ಲಿ ಚುನಾವಣೆಗಳು ಬರುತ್ತಾ ಇರುತ್ತವೆ. ತಾಲೂಕು, ಜಿಲ್ಲಾ ಪಂಚಾಯತ್ ಹಾಗೇ ಪಾರ್ಲಿಮೆಂಟ್ ಚುನಾವಣೆ ಸೇರಿದಂತೆ ವರ್ಷದಲ್ಲಿ ಕೆಲವೊಮ್ಮೆ ಮೂರು ಚುನಾವಣೆಗಳು ಬರುತ್ತವೆ. ಹೀಗಿರುವಾಗ ರೈತರು ವರ್ಷದಲ್ಲಿ ಮೂರು ತಿಂಗಳಿಗೊಮ್ಮೆ ತಮ್ಮ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಅಡಮಾನ ಇಡಬೇಕಾಗುತ್ತದೆ. ಹೀಗೆ ಅಡಮಾನ ಇಡುವಾಗ ರೈತರಿಂದ ಕೆಲವು ಪೊಲೀಸ್ ಠಾಣೆಯಲ್ಲಿ ೨೦೦ ರೂಪಾಯಿಗಳನ್ನು ಡೆಫಾಸಿಟ್ ಪಡೆದುಕೊಳ್ಳುತ್ತಿದ್ದಾರೆ. ಮೂರು ವರ್ಷಕ್ಕೆ ೧೫೦೦ ರೂಪಾಯಿ ಚಾರ್ಜ್ ಪಾವತಿಸಬೇಕಾಗುತ್ತದೆ. ನಾನೂ ಕೂಡ ಕೋವಿಯನ್ನು ಅಡಮಾನ ಇಡುವಾಗ ೨೦೦ ರೂಪಾಯಿ ಡೆಫಾಸಿಟ್ ಕಟ್ಟಿದ್ದೇನೆ. ಕೆಲವೊಂದು ಪೊಲೀಸ್ ಠಾಣೆಯಲ್ಲಿ ೨೦೦ ರೂಪಾಯಿ ಡೆಫಾಸಿಟ್ ತೆಗೆದುಕೊಳ್ಳುತ್ತಿಲ್ಲ, ವರ್ಷದಲ್ಲಿ ಹಲವು ಚುನಾವಣೆಗಳು ಬರುತ್ತಿರುವುದರಿಂದ ರೈತರು ಪದೇ ಪದೇ ತಮ್ಮ ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಅಡಮಾನ ಇಡುವುದರಿಂದ ರೈತರು ಬೆಳೆದ ಬೆಳೆಗಳು ಕಾಡು ಪ್ರಾಣಿಗಳಿಂದ ನಾಶವಾಗುವ ಸಂಭವ ಕೂಡ ಇದೆ. ಇತ್ತೀಚಿನ ದಿನಗಳಲ್ಲಿ ಮಂಗಗಳು ಕೇವಲ ಪಟಾಕಿ ಸಿಡಿದರೆ ಓಡುವುದಿಲ್ಲ ಅವುಗಳಿಗೂ ಕೋವಿ ತೋರಿಸಿ ಹೆದರಿಸಬೇಕಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು ೧೧೫೦೦ ಕೋವಿ ಪರವಾನಗೆದಾರರು ಇದ್ದು ಅವರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕಾಗಿ ಕೋರಿಕೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ವಿಧಾನ ಸಭಾ ಅಧಿವೇಶನದಲ್ಲಿ ಗೃಹಸಚಿವ ಡಾ.ಎಚ್.ಜಿ ಪರಮೇಶ್ವರ್‌ರವರಲ್ಲಿ ಕೇಳಿಕೊಂಡರು.
ಅಶೋಕ್ ಕುಮಾರ್ ರೈಯವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್‌ರವರು, ಚುನಾವಣಾ ನೀತಿ ಸಂಹಿತೆಯ ಸಂದರ್ಭದಲ್ಲಿ ರೈತರು ತಮ್ಮ ಬಂದೂಕುಗಳನ್ನು ಪೊಲೀಸ್ ಠಾಣೆಯಲ್ಲಿ ಡೆಫಾಸಿಟ್ ಮಾಡುವ ಕ್ರಮ ಬಹಳ ಹಿಂದೆಯೇ ಇದೆ. ಆದರೆ ಬಂದೂಕುಗಳನ್ನು ಡೆಫಾಸಿಟ್ ಮಾಡುವಾಗ ಯಾವುದೇ ಹಣ ತೆಗೆದುಕೊಳ್ಳಲು ಅವಕಾಶ ಇಲ್ಲ. ಶಾಸಕರು ಹೇಳಿದಂತೆ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್ ಸೇರಿದಂತೆ ಯಾರಾದರು ಹಣ ಪಡೆದುಕೊಂಡರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನು ಬಂದೂಕುಗಳನ್ನು ಡೆಫಾಸಿಟ್ ಇಡುವುದರಿಂದ ರೈತರಿಗೆ ಬೆಳೆ ನಾಶ, ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಎಂದರೆ ಅವರು ಎಕ್ಸಂಪ್ಸನ್ ಸಮಿತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಕಮಿಟಿಯಿಂದ ಪರವಾನಗೆ ಪಡೆದುಕೊಂಡರೆ ಬಂದೂಕುಗಳನ್ನು ಪೊಲೀಸ್ ಠಾಣೆಯಲ್ಲಿ ಡೆಫಾಸಿಟ್ ಇಡುವ ಅಗತ್ಯವಿಲ್ಲ ಎಂದು ಉತ್ತರ ನೀಡಿದರು. ಈ ಮಧ್ಯೆ ಮಾತನಾಡಿದ ಅಶೋಕ್ ಕುಮಾರ್ ರೈಯವರು, ೨೦೦ ರೂಪಾಯಿ ಡೆಫಾಸಿಟ್ ಇಡುವ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಬರೆಯಲಾಗಿದೆ ಎಂದರು. ಇದಕ್ಕೆ ಸ್ಪೀಕರ್ ಯು.ಟಿ.ಖಾದರ್‌ರವರು ಮಾತನಾಡಿ, ೨೦೦ ರೂಪಾಯಿ ಡೆಫಾಸಿಟ್ ಮಾಡುವಂತಿಲ್ಲ ಎಂದು ಸರಕಾರ ಹೇಳಿದೆ ಅಲ್ವ ಎಂದು ಹೇಳಿದರು.
ಬಾಕ್ಸ್ ಹಣ ಪಡೆದುಕೊಂಡರೆ ಕಾನೂನು ಕ್ರಮ ಕೋವಿಯನ್ನು ಠಾಣೆಯಲ್ಲಿ ಅಡವಿಡುವ ಸಂದರ್ಭದಲ್ಲಿ ಪೊಲೀಸರು ಡೆಫಾಸಿಟ್ ಕೇಳಿದರೆ ಅಥವಾ ಕೋವಿ ಅಡಮಾನಿಗೆ ಫೀಸ್ ಕೇಳಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೋವಿ ಅಡಮಾನಿಗೆ ಡೆಫಾಸಿಟ್ ಇಡುವ ವ್ಯವಸ್ಥೆಯೇ ಇಲ್ಲ, ಹೀಗಿರುವಾಗ ಹಣ ಪಡೆದುಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಪೊಲೀಸರು ಈ ರೀತಿಯಾಗಿ ಮಾಡಿದ್ದಲ್ಲಿ ಇಲಾಖೆಯ ಗಮನಕ್ಕೆ ತರುವಂತೆ ಗೃಹ ಸಚಿವ ಡಾ.ಎಚ್.ಜಿ ಪರಮೇಶ್ವರ್ ಸದನದಲ್ಲಿ ತಿಳಿಸಿದರು.
ಬಾಕ್ಸ್ ಕೃಷಿಕರಿಗೆ ವರದಾನ ಕಳೆದ ಹಲವಾರು ವರ್ಷಗಳಿಂದ ಚುನಾವಣಾ ಸಂದರ್ಭದಲ್ಲಿ ತಮ್ಮ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಅಡವಿಟ್ಟಾಗ ರೂ.೨೦೦ ರಂತೆ ಹಣ ಪಾವತಿ ಮಾಡುತ್ತಿದ್ದರು. ಒಂದು ವರ್ಷದಲ್ಲಿ ೨ ರಿಂದ ೩ ಚುನಾವಣೆಗಳು ಬಂದರೆ ಕೃಷಿಕರು ವರ್ಷವಿಡೀ ಕೋವಿಗಾಗಿ ಹಣ ವ್ಯಯಿಸುವುದು ಮಾತ್ರವಲ್ಲದೆ ಕೋವಿಯನ್ನು ಕೃಷಿ ರಕ್ಷಣೆಗೆ ಬಳಸುವಲ್ಲಿಯೂ ತೊಂದರೆಗಳಾಗುತ್ತಿತ್ತು. ಇದೀಗ ಶಾಸಕರಾದ ಅಶೋಕ್ ಕುಮಾರ್ ರೈಯವರ ಮೂಲಕ ಕೋವಿ ಅಡಮಾನಿನ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಸಿಕ್ಕಿರುವ ಉತ್ತರದಿಂದ ಕೃಷಿಕರಿಗೆ ವರದಾನವಾಗಿ ಪರಿಣಮಿಸಿದೆ.


LEAVE A REPLY

Please enter your comment!
Please enter your name here