ಮಂಗಳೂರು: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಮುಳಿಹಿತ್ಲುವಿನಲ್ಲಿ ಮೊನ್ನೆ ಮಾಲೀಕನಿಂದ ಕೊಲೆಯಾದ ಕಾರ್ಮಿಕ ಗಜ್ವಾನ್ ಯಾನೆ ಜಗ್ಗು ಎಂಬಾತನ ವಿಳಾಸ ಪತ್ತೆಗೆ ಪಾಂಡೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಉತ್ತರ ಭಾರತ ಮೂಲದವನು ಎನ್ನಲಾದ ಈತನ ವಾರಸುದಾರರು ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಈತನನ್ನು ನಗರದಲ್ಲಿ ಗಜ್ವಾನ್ ಎಂದು ಕರೆಯಲಾಗುತ್ತಿತ್ತು. ಆದರೆ ಈತನ ನಿಜ ಹೆಸರೇನು ಎಂಬುದು ಕೂಡ ಯಾರಿಗೂ ತಿಳಿದಿಲ್ಲ. ಸುಮಾರು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದೃಢಕಾಯ ಶರೀರ, ಕಪ್ಪು ತಲೆ ಕೂದಲು, ಕುರುಚಲು ಗಡ್ಡ ಹೊಂದಿದ್ದ ಈತನ ಸಂಬಂಧಿಕರು ಅಥವಾ ಪರಿಚಯಸ್ಥರಿದ್ದರೆ ಪಾಂಡೇಶ್ವರ ಠಾಣೆಯನ್ನು (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪಿ ಅಂಗಡಿ ಮಾಲೀಕ ತೌಸಿಫ್ ಹುಸೇನ್ ಮೂಲತಃ ಹಾಸನದ ಬೇಲೂರಿನವನಾಗಿದ್ದು, ನಗರದಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.