ಮಂಗಳೂರು: ನಿವೃತ್ತಿಯಾಗುತ್ತಿರುವ ಶಿಕ್ಷಕಿಯ ದಾಖಲೆಗಳಿಗೆ ಸಹಿ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟು, ಶುಕ್ರವಾರ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಾಲಾ ಸಂಚಾಲಕಿಯನ್ನು ಬಂಧಿಸಿದ್ದಾರೆ. ನಗರದ ಬಜ್ಪೆ ಶ್ರೀ ನಿರಂಜನ ಸ್ವಾಮಿ ಅನುದಾನಿಕ ಹಿ.ಪ್ರಾ. ಶಾಲೆಯ ಸಂಚಾಲಕಿ ಜ್ಯೋತಿ ಪೂಜಾರಿ ಲೋಕಾಯಕ್ತ ಬಲೆಗೆ ಬಿದ್ದ ಆರೋಪಿ. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿದ್ದ ಶೋಭಾರಾಣಿಯವರ ನಿವೃತ್ತಿ ಹಾಗೂ ಉಪದಾನ ದಾಖಲೆಗಳಿಗೆ ಶಾಲಾ ಸಂಚಾಲಕರು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಬೇಕಾಗಿತ್ತು. ಆದರೆ ಈ ದಾಖಲೆಗಳಿಗೆ ಸಹಿ ಹಾಕಲು ಜ್ಯೋತಿ ಪೂಜಾರಿ ಲಂಚಕ್ಕೆ ಬೇಡಿಕೆಯಿಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದಾಳೆ. ಶೋಭರಾಣಿಯವರು ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಹಾಗು ಮುಖ್ಯಶಿಕ್ಷಕಿಯಾಗಿ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಜುಲೈ 31ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಆದ್ದರಿಂದ ತನ್ನ ನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ಮೇ 25ರಂದು ಶಾಲೆಯ ಮ್ಯಾನೇಜ್‌ಮೆಂಟ್ ಸಂಚಾಲಕಿ ಜ್ಯೋತಿ ಎನ್ ಪೂಜಾರಿಯವರಿಗೆ ಮನವಿ ಮಾಡಿದ್ದರು. ಆದರೆ ಜ್ಯೋತಿ ಎನ್.ಪೂಜಾರಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕದೆ ಸತಾಯಿಸಿದ್ದಾರೆ. ಅಲ್ಲದೆ ಸಹಿ ಹಾಕಿ ಕಳುಹಿಸಬೇಕಾದರೆ 20 ಲಕ್ಷ ರೂ. ಲಂಚ ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಆ ಬಳಿಕ ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡಬೇಕಾದರೆ, 5 ಲಕ್ಷ ರೂ. ಕೊಡಬೇಕೆಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಂದು ಶೋಭರಾಣಿಯವರಿಂದ ಜ್ಯೋತಿಯವರು ಐದು ಲಕ್ಷ ಲಂಚದ ಹಣ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಅಧಿಕಾರಿಗಳು ಆಕೆಯನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.