
ಬೆಂಗಳೂರು: ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಭದ್ರತಾ ಲೋಪವಾಗಿರುವುದು ವರದಿಯಾಗಿದೆ. ಬಿಗಿ ಭದ್ರತೆಯಿದ್ದರೂ ಅನಾಮಧೇಯ ವ್ಯಕ್ತಿಯೊಬ್ಬ ಆರಾಮಾಗಿ ವಿಧಾನಸಭೆಗೆ ಪ್ರವೇಶಿಸಿ ಶಾಸಕರ ಸ್ಥಾನದಲ್ಲಿ ಕುಳಿತಿದ್ದಾರೆ. ಆ ವ್ಯಕ್ತಿಯನ್ನು ಕರಿಯಪ್ಪ ಅಲಿಯಾಸ್ ತಿಪ್ಪೆರುದ್ರ ಎಂದು ಗುರುತಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸುಮಾರು 15 ನಿಮಿಷಗಳ ಕಾಲ ಶಾಸಕರ ಜಾಗದಲ್ಲಿ ಕುಳಿತಿದ್ದ ಕರಿಯಪ್ಪ ನಂತರ ಎದ್ದು ಹೋಗಿದ್ದಾನೆ. ಗುರುಮಿಠಕಲ್ ಶಾಸಕ ಶರಣಗೌಡ ಕುಂದಕೂರ್ ಇದನ್ನು ಗಮನಿಸಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ ಅವರ ಸೀಟಿನಲ್ಲಿ ಕುಳಿತಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ಶಾಸಕ ಶರಣಗೌಡ ಕುಂದಕೂರ್, “ಜಿ.ಟಿ. ದೇವೇಗೌಡರ ಬಳಿ ಆತ ಗೊತ್ತಾ ಎಂದು ಕೇಳಿದೆ, ಅವರು ಯಾರೋ ಗೊತ್ತಿಲ್ಲ ಎಂದರು. ನಾನೇ ಹೋಗಿ ಆತನ ಬಳಿ ಪ್ರಶ್ನೆ ಮಾಡಿದ್ದಕ್ಕೆ ನಾನು ಮೊಳಕಾಲ್ಮೂರು ಶಾಸಕ ಎಂದು ಹೇಳಿದ, ಇದನ್ನು ಸ್ಪೀಕರ್ ಯು.ಟಿ. ಖಾದರ್ ಗಮನಕ್ಕೆ ತಂದಿದ್ದೇನೆ” ಎಂದು ಹೇಳಿದ್ದಾರೆ.




ಸಿಸಿಬಿ ಜಂಟಿ ಆಯುಕ್ತರಿಂದ ತೀವ್ರ ವಿಚಾರಣೆ


ಸಿದ್ದರಾಮಯ್ಯ ಬಜೆಟ್ ಮಂಡಿಸುವ ವೇಳೆ ಸದನದ ಒಳಗಡೆ ಕೂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಬಂಧಿತ ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದಾರೆ. 70 ವರ್ಷದ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿ ಒಳಗೆ ಹೋಗಿದ್ದು, ಇದನ್ನು ಪೊಲೀಸ್ ಆಯುಕ್ತ ಶರಣಪ್ಪ ಗಂಭೀರವಾಗಿ ಪರಿಗಣಿಸಿದ್ದಾರೆ. ಮಾರ್ಷಲ್ಸ್‌ಗೆ ಆವಾಜ್ ಹಾಕಿದ್ದ ಕರಿಯಪ್ಪ ಬಜೆಟ್ ಮಂಡನೆ ವೇಳೆ ಕರಿಯಪ್ಪ ನೇರವಾಗಿ ವಿಧಾನಸೌಧಕ್ಕೆ ಪ್ರವೇಶಿಸಿದ್ದಾರೆ. ಪ್ರವೇಶ ಜಾಗದಲ್ಲಿ ಮಾರ್ಷಲ್ಸ್ ಕರಿಯಪ್ಪನವರನ್ನು ಪ್ರಶ್ನೆ ಮಾಡಿದಾಗ, ನಾನು ಶಾಸಕ ಗೊತ್ತಾಗಲ್ವಾ ಎಂದು ಆವಾಜ್ ಕೂಡ ಹಾಕಿದ್ದಾರೆ. ಗುರುತಿನ ಚೀಟಿ ಕೇಳಿದಾಗ, ನಾನು ಮೊಳಕಾಲ್ಮೂರು ಶಾಸಕ ಯಾಕ್ರೀ ನಿಮಗೆ ಐಡಿ, ಐಡಿ ಕಾರಿನ ಬಳಿ ಇದೆ ಎಂದು ಜೋರಾಗಿಯೇ ಹೇಳಿದ್ದಾರೆ. ನಂಬಿದ ಮಾರ್ಷಲ್‌ಗಳು ಕರಿಯಪ್ಪನಿಗೆ ಒಳಗೆ ಪ್ರವೇಶಿಸಲು ಅವಕಾಶ ಕೊಟ್ಟಿದ್ದಾರೆ. ಒಳಗೆ ಹೋದ ಬಳಕ ನೇರವಾಗಿ ಶಾಸಕರ ಜಾಗದಲ್ಲಿ ಕುಳಿತಿದ್ದಾರೆ. ಈ ವೇಳೆ ಶಾಸಕ ಶರಣ ಗೌಡ ಅನುಮಾನಗೊಂಡು ವಿಚಾರಿಸಿದಾಗಲೂ ನಾನು ಮೊಳಕಾಲ್ಮೂರು ಶಾಸಕ ಎಂದೇ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಶರಣಗೌಡ ಕಾರ್ಯದರ್ಶಿ ಮೂಲಕ ಸ್ಪೀಕರ್ ಗಮನಕ್ಕೆ ಬಂದಿದ್ದು, ಮಾರ್ಷಲ್‌ಗಳ ಮೂಲಕ ವ್ಯಕ್ತಿಯನ್ನು ಹೊರ ಕಳುಹಿಸಿದ್ದು, ವಿಧಾನಸೌಧ ಪೊಲೀಸರು ಕರಿಯಪ್ಪನನ್ನು ವಶಪಡೆದುಕೊಂಡಿದ್ದಾರೆ.