ಮಂಗಳೂರು: ಬಿಗ್ ಬಾಸ್ ಒಟಿಟಿ ಹಾಗೂ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ “ಸರ್ಕಸ್” ತುಳು ಸಿನಿಮಾ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.ಇಂದಿನಿಂದ “ಸರ್ಕಸ್” ತುಳು ಚಿತ್ರ ಚಿಕ್ಕಮಗಳೂರು, ತೀರ್ಥಹಳ್ಳಿ, ಸಾಗರ,ಸಿದ್ದಾಪುರ ಹಾಗೂ ಶನಿವಾರ ಸಂತೆಯಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ಪ್ರೀಮಿಯರ್ ಶೋ ಗೆ ದೇಶ ವಿದೇಶಗಳಲ್ಲಿ ಅದ್ಭುತ ಪ್ರತಿಕ್ರಿಯೆ ದೊರಕಿದ್ದು ಈಗಾಗಲೇ ಜೂನ್ 23 ರಂದು ಕರಾವಳಿಯಾದ್ಯಂತ ಬಿಡುಗಡೆಗೊಂಡ ಸರ್ಕಸ್ ಚಿತ್ರ ತುಳುನಾಡಿನ ಪ್ರೇಕ್ಷಕರ ಮನಸನ್ನು ಗೆದ್ದು ಇಂದು ಪ್ಯಾನ್ ಇಂಡಿಯಾ ರಿಲೀಸ್ ಕೂಡ ಆಗಿದೆ. ಬೆಂಗಳೂರು, ಮಡಿಕೇರಿ,ಮೈಸೂರು,ಶಿವಮೊಗ್ಗ, ಬೆಳಗಾವಿ , ಹುಬ್ಬಳ್ಳಿ, ಸಕಲೇಶಪುರ, ತುಮಕೂರು ಹಾಗೂ ಹೊರ ರಾಜ್ಯಗಳಲ್ಲಿ ಮುಂಬಯಿ, ಪುಣೆ, ಹೈದರಬಾದ್, ಅಹಮದಾಬಾದ್ , ಡೆಲ್ಲಿ, ಕೊಚ್ಚಿನ್, ಕೊಯಿಕೊಡ್ ಮುಂತಾದ ಕಡೆ ಬಿಡುಗಡೆಗೊಂಡಿದ್ದು ಇದು ತುಳು ಚಿತ್ರರಂಗದಲ್ಲಿ ದೊಡ್ಡ ಇತಿಹಾಸ. ಇದೀಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಚಿತ್ರ ತಂಡ ನೀಡಿದೆ ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲಬಾರಿಗೆ ತುಳು ಚಿತ್ರವೊಂದು ಬಿಡುಗಡೆಯಾದ ಮೊದಲ ವಾರದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ದಾಖಲೆ ಮಾಡಿ ರೂಪೇಶ್ ಶೆಟ್ಟಿಯ ಕಳೆದ ಸೂಪರ್ ಹಿಟ್ ಚಿತ್ರ “ಗಿರಿಗಿಟ್” ದಾಖಲೆಯನ್ನು ಈ ಭಾರಿಯ “ಸರ್ಕಸ್” ಚಿತ್ರ ಮುರಿದು ಮುನ್ನುಗ್ಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಕನ್ನಡ ಹಾಗೂ ತುಳು ಚಿತ್ರರಂಗದ ನಟ, ನಟಿಯರು ಹಾಗೂ ತಂತ್ರಜ್ಞರು ಭಾಗವಹಿಸಿ ಚಿತ್ರ ವೀಕ್ಷಣೆ ಮಾಡಿ “ಸರ್ಕಸ್” ಚಿತ್ರವನ್ನು ಮೆಚ್ಚಿದ್ದಾರೆ, ಇನ್ನೂ ಕೂಡಾ ಹಲವಾರು ಹೊರ ದೇಶಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಕರೆಗಳು ಬರುತ್ತಿದ್ದು ಅತೀ ಶೀಘ್ರದಲ್ಲಿ “ಸರ್ಕಸ್” ಚಿತ್ರ ವಿಶ್ವದ ಎಲ್ಲಾ ತುಳುವರನ್ನು ತಲುಪಲಿದೆ ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.
ತುಳು ಸಿನಿಮಾರಂಗದಲ್ಲಿ ಅತಿ ದೊಡ್ಡ ಹಿಟ್ ಚಿತ್ರ “ಗಿರಿಗಿಟ್” ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ನಿರ್ದೇಶನದ 2ನೇ ಚಿತ್ರ ಸರ್ಕಸ್. ಗಿರಿಗಿಟ್ ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ.
ಸಲಗ ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳುವಿಗೆ ಪರಿಚಯ ಆಗುತ್ತಿದ್ದಾರೆ.
ಅದೇ ರೀತಿ ರಚನಾ ರೈ ಎಂಬ ನಟಿಯನ್ನು ತುಳು ಸಿನಿಮಾ ರಂಗಕ್ಕೆ ಪರಿಚಯಿಸಲಾಗಿದೆ..
‘ಗಿರಿಗಿಟ್’ ತುಳು ಚಿತ್ರಗಳ ಪೈಕಿ ಅತ್ಯಂತ ಯಶಸ್ವಿಯಾದ ಹಾಸ್ಯಮಯ ಚಿತ್ರ. ಹಲವು ದೇಶಗಳಲ್ಲಿ ಗಿರಿಗಿಟ್ ಬಿಡುಗಡೆ ಗೊಂಡು ಭರ್ಜರಿ ಪ್ರದರ್ಶನ ಕಂಡಿದೆ. ಈಗ ಅದೇ ತಂಡ ‘ಸರ್ಕಸ್’ ಸಿನಿಮಾ ಮಾಡಿದೆ.
ತುಳು ಚಿತ್ರಗಳ ಸಾಮಾನ್ಯ ಪ್ರಕಾರವೇ ಹಾಸ್ಯ. ‘ಸರ್ಕಸ್’ನಲ್ಲೂ ಅದೇ ಪ್ರಧಾನ ವಸ್ತು. ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್, ತಾರಾಗಣದಲ್ಲಿದ್ದಾರೆ.
ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕರಾವಳಿಯಾದ್ಯಂತ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ತೀಕರಣ ನಡೆದಿದೆ.
ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ, ರಾಹುಲ್ ವಶಿಷ್ಠ ಸಂಕಲನ, ಲೋಯ್ ಅವರ ಸಂಗೀತ ಈ ಚಿತ್ರಕ್ಕಿದೆ.