ಉಡುಪಿ: ನಿರಂತರವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಉಡುಪಿ ನಗರದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು ಹಲವು ಮನೆಗಳಿಗೆ ನೀರು ನುಗ್ಗಿವೆ. ಇಲ್ಲಿನ ನೂರಾರು ಕುಟುಂಬಗಳನ್ನು ಸ್ಥಳಾಂತರಗೊಳಿಸುವ ಕಾರ್ಯ ಮುಂದುವರಿದಿದೆ.
ನಗರದ ಬೈಲಕೆರೆ ಮೂಡನಿಡಂಬೂರು ಕೊಡವೂರು ನಿಟ್ಟೂರು, ಕಲ್ಸಂಕ ತೆಂಕಪೇಟೆ ಸೇರಿ ಹಲವು ಪ್ರದೇಶಗಳಲ್ಲಿ ನೆರೆ ಕಂಡು ಬಂದಿದ್ದು ನೂರಾರು ಮನೆಗಳು ಜಲ ದಿಗ್ಬಂಧನಕ್ಕೆ ಒಳಗಾಗಿದೆ. ಬೆಳಗಿನ ಜಾವ ನೀರಿನ ಪ್ರಮಾಣ ದಲ್ಲಿ ಏರಿಕೆ ಕಂಡಿದ್ದು ಕೂಡಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳ ಉಡುಪಿ ನಗರಸಭೆ ಕಾರ್ಯಪಡೆ ಸ್ಥಳಕ್ಕೆ ಆಗಮಿಸಿ, ಬೋಟಿನ ಮೂಲಕ ಹಾಗೂ ಹಗ್ಗದ ಸಹಾಯದಿಂದ ಮನೆ ಮಂದಿಯನ್ನು ರಕ್ಷಿಸುವ ಕಾರ್ಯ ನಡೆಸಿದ್ದಾರೆ. ಇವರೊಂದಿಗೆ ಸ್ಥಳೀಯರು ಕೂಡ ಕೈಜೋಡಿಸಿಕೊಂಡಿದ್ದಾರೆ.
ನೆರೆಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಎಸ್ ಪಿ ಅಕ್ಷಯ್ ಹಾಕೇ ಮಚ್ಚಿಂದ್ರ, ನಗರಸಭೆ ಪೌರಾಯುಕ್ತ ಆರ್ ಪಿ ನಾಯಕ್ ಸೇರಿದಂತೆ ಹಲವು ಅಧಿಕಾರಿಗಳು ತೆರಳಿ ರಕ್ಷಣಾ ಕಾರ್ಯದಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.