ಲಕ್ನೋ : ಅಧಿಕಾರ, ಹಣದ ದಾಹ ಹೇಗಿರುತ್ತದೆ ಎಂಬುದಕ್ಕೆ ಆಗಾಗ ನಡೆಯುತ್ತಿರುವ ಇ.ಡಿ, ಲೋಕಾಯುಕ್ತ ಸಂಸ್ಥೆಗಳ ದಾಳಿಯಿಂದ ಬೆಳಕಿಗೆ ಬರುತ್ತದೆ. ಆದರೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಹೆಂಡತಿ ಮತ್ತು ಮಕ್ಕಳು 500 ರೂ. ಮುಖಬೆಲೆಯ ಕಂತೆ, ಕಂತೆ ನೋಟುಗಳ ರಾಶಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆದ ನಂತರ ಪೊಲೀಸ್ ಅಧಿಕಾರಿ ಸಂಕಷ್ಟ ಸಿಲುಕಿರುವ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯ ಹೆಂಡತಿ ಮತ್ತು ಮಕ್ಕಳು 500 ರೂ. ನೋಟುಗಳ ಬಂಡಲ್‌ಗಳ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸ್ ಅಧಿಕಾರಿಯನ್ನು ತಕ್ಷಣವೇ ವರ್ಗಾವಣೆ ಮಾಡಿ, ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಪೊಲೀಸ್ ಅಧಿಕಾರಿಯ ಹೆಂಡತಿ ಮತ್ತು ಮಕ್ಕಳು ಬೆಡ್ ಮೇಲೆ 500 ರೂ. ಮುಖಬೆಲೆಯ ನೋಟುಗಳ 27 ಬಂಡಲ್ ಗಳನ್ನು ಹರಡಿಕೊಂಡು ಕುಳಿತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 27 ಬಂಡಲ್ ಗಳ ಒಟ್ಟು ಮೊತ್ತ 14 ಲಕ್ಷ ರೂಪಾಯಿ ಎಂದು ವರದಿ ವಿವರಿಸಿದೆ. ಘಟನೆಗೆ ಸಂಬಂಧಿಸಿದಂತೆ ಉನ್ನಾವೋ ಪೊಲೀಸ್ ಠಾಣಾಧಿಕಾರಿ ರಮೇಶ್ ಚಂದ್ರ ಸಹಾನಿಯನ್ನು ವರ್ಗಾವಣೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೊದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಹಾನಿ, ಈ ಫೋಟೊವನ್ನು 2021ರ ನವೆಂಬರ್ 14ರಂದು ತೆಗೆದಿದ್ದು, ತಮ್ಮ ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದಾಗ ಬಂದ ಹಣ ಇದು ಎಂದು ತಿಳಿಸಿದ್ದಾರೆ.