ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ ನಲ್ಲಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಕ್ಕಳು ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊನ್ನೆ ಮಕ್ಕಳು ಪಕ್ಕದ ಪಾರ್ಕ್ ಗೆ ಹೋಗಿದ್ದು, ಆದರೆ ಶನಿವಾರ ಸಂಜೆಯಾದರೂ ವಾಪಸ್ ಬಾರದೇ ಇದ್ದಾಗ ಪೊಲೀಸರಿಗೆ ದೂರು ನೀಡಿ ಅಪಹರಣ ಪ್ರಕರಣ ದಾಖಲಿಸಲಾಗಿದೆ.
ನಂತರ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ, ಕಾನ್‌ಸ್ಟೆಬಲ್ ಒಬ್ಬರು ತಮ್ಮ ಮನೆಗಳ ಬಳಿ ಎಸ್‌ಯುವಿ ನಿಲ್ಲಿಸಿರುವುದನ್ನು ನೋಡಿದಾಗ ಅದರೊಳಗೆ ಮೂವರು ಮಕ್ಕಳ ಶವಗಳು ಪತ್ತೆಯಾಗಿವೆ.
ನಾಪತ್ತೆಯಾಗಿರುವ ಮೂವರು ಮಕ್ಕಳ ಮೃತದೇಹಗಳು ಪಂಚಪೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಫರೂಖ್ ನಗರದಲ್ಲಿ ಪತ್ತೆಯಾಗಿವೆ. ಸ್ಕ್ರ್ಯಾಪ್ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ಹಳೆಯ ಕಾರ್ ನೊಳಗೆ ಶವಗಳು ಪತ್ತೆಯಾಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಮೂವರು ಮಕ್ಕಳು ಆಟವಾಡುತ್ತಾ ಕಾರಿನಲ್ಲಿ ಕುಳಿತು ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಮೂವರೂ ಶಾಖ ಮತ್ತು ಉಸಿರುಗಟ್ಟುವಿಕೆಯಿಂದ ಸತ್ತರು. ಮಾಹಿತಿ ತಿಳಿದ ತಕ್ಷಣ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಸೇರಿದಂತೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೌಫಿಕ್ ಫಿರೋಜ್ ಖಾನ್(4), ಅಲಿಯಾ ಫಿರೋಜ್ ಖಾನ್(6) ಮತ್ತು ಅಫ್ರೀನ್ ಇರ್ಷಾದ್ ಖಾನ್(6) ಮೃತಪಟ್ಟ ಮಕ್ಕಳು. ಶನಿವಾರ ಮಧ್ಯಾಹ್ನ ಟೇಕಾ ನಾಕಾದ ಫಾರೂಖ್ ನಗರ ಮೈದಾನದಲ್ಲಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು. ಮೂವರೂ ಶವವಾಗಿ ಪತ್ತೆಯಾಗಿದ್ದಾರೆ.