Government school children were given notebooks to celebrate the birthday of the minister
ಕೊಪ್ಪಳ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರ ಜನ್ಮ ದಿನಾಚರಣೆ ನಿಮಿತ್ಯ ನಗರದ ವಿಜಯನಗರ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಗಣೇಶ ನಗರ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಿ ಜನ್ಮ ದಿನಾಚರಣೆಯನ್ನು ಸರಳವಾಗಿ ವಿನೂತನವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವವಹಿಸಿದ್ದ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಅವರು, ಜಿಲ್ಲೆಯಲ್ಲಿ ಮೂರನೇ ಬಾರಿಗೆ ಸಚಿವರಾಗಿರುವ ಶಿವರಾಜ ತಂಗಡಗಿ ಅವರು ಸರಳ ವ್ಯಕ್ತಿತ್ವದವರು, ಸದಾ ಎಲ್ಲರಿಗೂ ಗೌರವ ನೀಡುವ ಮತ್ತು ಸೇವಾಮನೋಭಾವ ಇರುವ ಅವರಿಂದ ಈ ಬಾರಿ ಜಿಲ್ಲೆಯಲ್ಲಿ ಸಾಕಷ್ಟು ನಿರೀಕ್ಷೆಗಳಿವೆ, ವಿಶೇಷವಾಗಿ ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ಸಚಿವರಾಗಿದ್ದು, ತಮ್ಮ ಸ್ವಂತ ಖರ್ಚಿನಿಂದ ಸಾಕಷ್ಟು ಪುಸ್ತಕಗಳನ್ನು ಹಲವು ವರ್ಷ ತಮ್ಮ ಕ್ಷೇತ್ರದ ಮಕ್ಕಳಿಗೆ ಕೊಡಿಸಿದ್ದು, ಈ ಬಾರಿ ಅವರಿಗೆ ಎರಡು ಉತ್ತಮ ಖಾತೆಗಳ ನಿರ್ವಹಣೆ ಜವಾಬ್ದಾರಿ ಸಿಕ್ಕಿದ್ದು ಅದರ ಮೂಲಕ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸಮಾಡುವ ಜೊತೆಗೆ ಎರಡೂ ಇಲಾಖೆಗಳನ್ನು ರಾಜ್ಯಮಟ್ಟದಲ್ಲಿ ಬೆಳೆಸುವ ಕೆಲಸ ಮಾಡುವ ಭರವಸೆ ಇದೆ ಎಂದರು. ಸಚಿವರು ತಮ್ಮ ಜನ್ಮದಿನಕ್ಕೆ ಆಡಂಬರ ಬೇಡ ಎಂದು ಕರೆನೀಡಿದ ಪ್ರಯುಕ್ತ ತಮ್ಮ ಸ್ವಂತ ಖರ್ಚಿನಿಂದ ಪುಸ್ತಕಗಳನ್ನು ವಿತರಿಸಿರುವುದಾಗಿ ಅವರು ಹೇಳಿದರು.
ಜಿಲ್ಲೆಯಲ್ಲಿ ಐದು ಉತ್ವಸ ಮಾಡುವ ಮೂಲಕ ಅವುಗಳಿಗೆ ಶಾಶ್ವತ ಅನುದಾನ ಮೀಸಲಿಡಬೇಕು ಅವುಗಳಲ್ಲಿ ಆನೆಗೊಂದಿ ಉತ್ಸವ, ಕನಕಗಿರಿ ಉತ್ಸವ, ಇಟಗಿ ಉತ್ಸವ, ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗೋತ್ಸವ ಜೊತೆಗೆ ಕೋಟಿಲಿಂಗ ಪುರ ಉತ್ಸವಗಳನ್ನು ಆರಂಭಿಸಲಿ ಎಂದ ಅವರು ತಮ್ಮ ಸಂಸ್ಥೆಯೇ ಮೊದಲು ಮೂರು ಉತ್ಸವಗಳನ್ನು ನಡೆಸಿದೆ, ಅದರಲ್ಲಿ ಕನಕಗಿರಿ ಉತ್ಸವ, ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗೋತ್ಸವ ಜೊತೆಗೆ ಕೋಟಿಲಿಂಗ ಪುರ ಉತ್ಸವಗಳನ್ನು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಾಡಿದ್ದು ಬಿಜೆಪಿ ಸರಕಾಋದಲ್ಲಿ ಈ ಎಲ್ಲಾ ಉತ್ಸವಗಳು ನಿಂತಿದ್ದು ಕಾಂಗ್ರೆಸ್ ಅವುಗಳನ್ನು ಪುನಃ ಆರಂಭಿಸಲಿ ಎಂದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರುಗಳಾದ ಅಂಬಿಕಾ ನಾಗರಾಳ, ಸೌಭಾಗ್ಯಲಕ್ಷ್ಮೀ ಗೊರವರ್, ಕಾವೇರಿ ರಾಗಿ, ಅನಿತಾ ಅಳ್ಳಮ್ಮನವರ, ವಿಜಯಲಕ್ಷ್ಮಿ ಗುಳೇದ, ಶಾಲೆಯ ಗುರುಗಳಾದ ರುದ್ರಮ್ಮ ಕೆಂಚರಡ್ಡಿ, ಜಿ. ಪದ್ಮಾವತಿ ಇತರರು ಇದ್ದರು.