Home ಪ್ರಖರ ವಿಶೇಷ ಸಾಹಿತ್ಯ ಸಂಘಟಕ ಭೇರ್ಯ ರಾಮಕುಮಾರ್ ಗೆಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

ಸಾಹಿತ್ಯ ಸಂಘಟಕ ಭೇರ್ಯ ರಾಮಕುಮಾರ್ ಗೆಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

0
To literary organizer Bherya Ramkumar
Kannada Sahitya Parishad Charity Award

ಮೈಸೂರು ಜಿಲ್ಲೆಯ ಸಾಹಿತ್ಯ ಸಂಘಟಕ,ಕನ್ನಡಪರ ಹೋರಾಟಗಾರ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಭೇರ್ಯ ರಾಮಕುಮಾರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಶ್ರೀಮತಿ ಸತ್ಯವತಿ ವಿಜಯ ರಾಘವ ಟ್ರಸ್ಟ್ ವತಿಯಿಂದ ಸ್ಥಾಪಿಲಾಗಿರುವ ದತ್ತಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ್ ಜೋಷಿ ಅವರು ಪ್ರಕಟಿಸಿದ್ದಾರೆ.


ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವ ಸತ್ಯವತಿ ವಿಜಯರಾಘವ ಚಾರಿಟಬಲ್ ಧರ್ಮದರ್ಶಿಗಳ ದತ್ತಿ ಪ್ರಶಸ್ತಿಗೆ ಕನ್ನಡ ಪರ ಹೋರಾಟಕ್ಕಾಗಿ ಮೈಸೂರು ಜಿಲ್ಲೆಯ ಭೇರ್ಯ ರಾಮಕುಮಾರ್ ಹಾಗೂ ಸಾಹಿತ್ಯ ಕ್ಷೇತ್ರ ಸೇವೆಗಾಗಿ ಬೆಂಗಳೂರಿನ ಸಾಹಿತಿ ಡಾ.ವಿಜಯಮಾಲಾ ರಂಗನಾಥ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ಹತ್ತು ಸಾವಿರ ರೂ.ಒಳಗೊಂಡಿದೆ ಎಂದು ಡಾ.ಮಹೇಶ್ ಜೋಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಮೂಲದವರಾದ ಭೇರ್ಯ ರಾಮಕುಮಾರ್
ಮೈಸೂರಿನ ಮಹಾರಾಜಾ ಪದವಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ಗೋಕಾಕ್ ಕನ್ನಡ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.ನಂತರ ನ.ನಾಗಲಿಂಗಸ್ವಾಮಿ ಅವರ ನೇತೃತ್ವದ ಕನ್ನಡ ಕ್ರಾಂತಿ ದಳ ಸಂಸ್ಥೆಯು ನಡೆಸಿದ ಹಲವಾರು ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 1985 ರಲ್ಲಿ ಗ್ರಾಮಾಂತರ ಬುದ್ದಿಜೀವಿಗಳ ಬಳಗ ಎಂಬ ಸಂಸ್ಥೆ ಆರಂಬಿಸಿ, ಸಾಹಿತ್ಯ ,ಸಾಂಸೃತಿಕ ಹಾಗೂ ಜಾನಪದ ಕಾರ್ಯಕ್ರಮಗಳನ್ನು ಸಂಘಟಿಸಲಾರಂಬಿಸಿದರು. 1985 ರಿಂದ ಇಲ್ಲಿಯವರೆಗೆ ಇವರು 343 ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಪ್ರತಿಯೊಂದು ಕಾರ್ಯಕ್ರಮ ದಲ್ಲಿಯೂ ಸಾಮೂಹಿಕ ನೇತ್ರದಾನ ಜಾಗೃತಿ ನಡೆಸಿ, ಸುಮಾರು ಏಳು ಸಾವಿರಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ಒಪ್ಪಿಗೆ ಪತ್ರ ಕೊಡಿಸಿದ್ದಾರೆ.ಪ್ರತಿಯೊಂದು ಸಾಹಿತ್ಯ ಕಾರ್ಯಕ್ರಮದಲ್ಲೂ ನೂರು ಸಸಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸುಮಾರು ಹತ್ತು ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಿದ್ದಾರೆ.ರಾಜ್ಯಮಟ್ಟದ ಕವನ ಸ್ಪರ್ಧೆಗಳನ್ನು ನಡೆಸಿ ಅತ್ಯುತ್ತಮ ಕವನಗಳ ವಿಜೇತರಿಗೆ ಕಾವ್ಯ ಪುರಸ್ಕಾರ ನೀಡುತ್ತಿದ್ದಾರೆ.ಹೊರನಾಡಿನಲ್ಲಿ, ಹೊರ ರಾಜ್ಯಗಳಲ್ಲಿ ಕನ್ನಡ ನಾಡು-ನುಡಿ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಸಾಧಕರನ್ನು ಸನ್ಮಾನಿಸುತ್ತಿದ್ದಾರೆ.ವಿಶೇಷ ಚೇತನ ಕವಿಗಳನ್ನು ಗುರ್ತಿಸಿ, ಗೌರವಿಸುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ಉದಯೋನ್ಮುಖ ಲೇಖಕ-ಲೇಖಕಿಯರ ಕೃತಿಗಳನ್ನು ತಮ್ಮದೇ ಆದ ‘ಪ್ರಗತಿಪರ ಪ್ರಕಾಶನ’ದ ವತಿಯಿಂದ ಪ್ರಕಟಿಸಿದ್ದಾರೆ.ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆ,ಪರಿಸರ ಜಾಗೃತಿ ,ಸ್ವಾವಲಂಬನೆ ಕುರಿತು ಉಪನ್ಯಾಸಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡಿರುವ ಇವರು ಆಡಳಿತದಲ್ಲಿ ಕನ್ನಡ ಬಳಸದಿರುವ ಬ್ಯಾಂಕುಗಳು, ಕೇಂದ್ರ ಸರ್ಕಾರಿ ಕಚೇರಿಗಳ ವಿರುದ್ದ, ಕನ್ನಡ ಭಾಷೆಯನ್ನು ಬಳಸದಿರುವ ನಾಮಫಲಕಗಳ ಅಳವಡಿಸಿರುವ ಸಂಸ್ಥೆಗಳ ವಿರುದ್ದ ನಿರಂತರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರುಗಳನ್ನು ನೀಡಿ, ಕನ್ನಡ ಜಾಗೃತಿಗೆ ಶ್ರಮಿಸುತ್ತಿದ್ದಾರೆ.ಮುಕ್ತ ವಿಶ್ವವಿದ್ಯಾಲಯದ ಪ್ರಚಾರ ಫಲಕದಲ್ಲಿ ಕನ್ನಡ ಭಾಷೆ ಬಳಸುವಂತೆ ಮಾಡುವಲ್ಲಿ, ಮೈಸೂರು ನಗರದ ವಿವಿಧ ಬಸ್ ನಿಲ್ದಾಣಗಳಲ್ಲಿ ಜೆ.ಕೆ.ಟೈರ್ಸ್ ಸಂಸ್ಥೆಯು ಅಳವಡಿಸಿದ್ದ ಆಂಗ್ಲಭಾಷಾ ನಾಮಫಲಕಗಳ ವಿರುದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕ್ರಮಕೈಗೊಳ್ಳುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿಗೆ ಸೇರಿರುವ ಕೇರಳ ರಾಜ್ಯದ ವಿವಿಧ ಗಡಿ ಗ್ರಾಮಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಇವರು ಅಭಿವೃದ್ದಿ ಪ್ರಾಧಿಕಾರ ದ ಮೂಲಕ ಯಶಸ್ವಿಯಾಗಿದ್ದಾರೆ.ವಿನಾಶದ ಅಂಚಿನಲ್ಲಿದ್ದ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಹಲ್ಮಿಡಿ ಶಾಸನದ ಪ್ರತಿರೂಪದ ರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ದೂರು ನೀಡಿ ಅದರ ಸಂರಕ್ಷಣೆಗೆ ಕಾರಣರಾಗಿದ್ದಾರೆ.ಜಿಲ್ಲೆಯ ಹಲವು ತಾಲ್ಲೂಕು ಕೇಂದ್ರಗಳ ಪೆಟ್ರೊಲ್ ಬಂಕ್ ಗಳ ಮುಂದೆ ಅಳವಡಿಸಲಾಗಿದ್ದ ಆಂಗ್ಲ ಭಾಷಾ ನಾಮಫಲಕಗಳ ವಿರುದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿ ಜಾಗೃತಿ ಮೂಡಿಸಿದ್ದಾರೆ.

ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳ ವಿವಿಧ ಶಾಲಾಕಾಲೇಜುಗಳಲ್ಲಿ ಇವರು ಕನ್ನಡ ನಾಡು-ನುಡಿಯ ಇತಿಹಾಸ ಹಾಗೂ ಮಹತ್ವ ಕುರಿತಂತೆ ಒಂದು ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ.ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಕವಿಗಳ ಬಗ್ಗೆ ಉಪನ್ಯಾಸ ಹಾಗೂ ಮಕ್ಕಳಿಗೆ ಪ್ರಶ್ನೋತ್ತರ ಸ್ಪರ್ಧೆ ನಡೆಸಿ, ಬಹುಮಾನ ನೀಡುತ್ತಿದ್ದಾರೆ.ರಾಜ್ಯದ ವಿವಿದೆಡೆ ಎಲ್ಲಿಯಾದರೂ ಕನ್ನಡ ಭಾಷೆ ಹಾಗೂ ನಾಡು-ನುಡಿಗೆ ಅಪಮಾನ ಉಂಟಾದಲ್ಲಿ ಪತ್ರಿಕೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.ಮೈಸೂರು,ಹಾಸನ,ಮಂಡ್ಯ ಜಿಲ್ಲೆಗಳಲ್ಲಿ ಶಿಥಿಲಾವಸ್ಥೆಗೆ ಒಳಗಾಗಿರುವ ಹಳೆಯ ಸರ್ಕಾರಿ ಕನ್ನಡ ಶಾಲೆಗಳ ದುರಸ್ಥಿಗಾಗಿ ಇದುವರೆಗೂ ಒಂದು ನೂರು ಶಾಲೆಗಳ ದುರವಸ್ಥೆ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಗಳಿಗೆ,ಶಿಕ್ಷಣ ಸಚಿವರಿಗೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ದೂರುನೀಡುವ ಮೂಲಕ ಕನ್ನಡ ಶಾಲೆಗಳ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ.

 ಸಾಹಿತ್ಯ ಸಂಭ್ರಮ ಎಂಬ ಮಾಸ ಪತ್ರಿಕೆಯ ಸಂಪಾದಕರಾಗಿರುವ ಇವರು ತಮ್ಮದೇ ಆದ ಪ್ರಗತಿಪರ ಪ್ರಕಾಶನದ ಮೂಲಕ ಉದಯೋನ್ಮುಖ ಕವಿಗಳ ಕೃತಿಗಳನ್ನು ಪ್ರಕಟಿಸಿದ್ದಾರೆ.
     ರಾಜ್ಯದ ವಿವಿಧ ದಿನಪತ್ರಿಕೆಗಳಲ್ಲಿ ಕನ್ನಡ ನಾಡು-ನುಡಿ ಕುರಿತಂತೆ, ಕೃಷಿ ಸಾಧಕರನ್ನು ಕುರಿತಂತೆ, ಪುರಾತನ ದೇವಾಲಯಗಳನ್ನು ಕುರಿತಂತೆ ಹಲವು ಲೇಖನಗಳನ್ನೂ ಸಹ ಬರೆದಿದ್ದಾರೆ.

ಭೇರ್ಯ ರಾಮಕುಮಾರ್ ಅವರ ಕನ್ನಡಪರ ಸೇವೆಯನ್ನು ಗುರ್ತಿಸಿ ಹಲವು ಪ್ರತಿಷ್ಟಿತ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.1994 ರ ಕೇಂದ್ರ ಸರ್ಕಾರದ ನೆಹರೂ ಯುವ ಪ್ರಶಸ್ತಿ, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರಗಳಲ್ಲಿ ನಡೆದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಭಿನಂದನಾ ಸನ್ಮಾನ,ಕೆ.ಅರ್.ನಗರ ಪಟ್ಟಣದ ಅಮೃತೋತ್ಸವ ಸಂದರ್ಭದಲ್ಲಿ ಸನ್ಮಾನ, 2022 ರ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳೂ ಸೇರಿದಂತೆ ವಿವಿಧ ಕನ್ನಡ ಸಂಘಗಳ ಸುಮಾರು ಒಂದು ನೂರಕ್ಕೂ ಹೆಚ್ಚು ಪ್ರಶಸ್ತಿ ಸನ್ಮಾನಗಳು ಇವರಿಗೆ ದೊರೆತಿವೆ. ಇದೀಗ ಇವರ ಸೇವೆಯನ್ನು ಗುರ್ತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮತಿ ಸತ್ಯವತಿ ವಿಜಯ ರಾಘವ ಧರ್ಮದರ್ಶಿಗಳ ದತ್ತಿ ಪ್ರಶಸ್ತಿ ನೀಡಿ ಇವರ ಸೇವೆಯನ್ನು ಗೌರವಿಸಿದೆ.


LEAVE A REPLY

Please enter your comment!
Please enter your name here