Home ಪ್ರಖರ ವಿಶೇಷ ಮುಂಗಾರು ಹಂಗಾಮು: ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ

ಮುಂಗಾರು ಹಂಗಾಮು: ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ

0
Monsoon Season: Meeting with Agriculture, Horticulture Department officials

ಕೊಪ್ಪಳ ಜೂನ್ 05 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಜೂನ್ 5ರಂದು ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂಗಾರು ಹಂಗಾಮಿನಲ್ಲಿನ ಇದುವರೆಗಿನ ಸಿದ್ಧತೆಗಳು ಮತ್ತು ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.
ತಾಲೂಕುವಾರು ಬಿತ್ತನೆ ಬೀಜಗಳ ವಿವರ, 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ತಾಲೂಕುವಾರು, ಮಾಹೆವಾರು ರಸಗೊಬ್ಬರ ಬೇಡಿಕೆ ವಿವರ, ಮೇವಿನ ಲಭ್ಯತೆ, ತೋಟಗಾರಿಕ ಬೆಳೆಗಳ ಪರಿಸ್ಥಿತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮುಂಗಾರು ಹಂಗಾಮಿನ ಮಳೆಗಳು ಈಗಾಗಲೇ ಆರಂಭಗೊಂಡಿವೆ. ವಿವಿಧೆಡೆಗಳಲ್ಲಿ ರೈತರು ಈಗಾಗಲೇ ಬಿತ್ತನೆ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆ ಹಾಗೂ ವಾತಾವರಣಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕು ಹಾಗೂ ಬೀಜೋಪಚಾರ ಹೇಗೆ ಮಾಡಬೇಕು ಎಂಬುದರ ಬಗ್ಗೆ ರೈತರಿಗೆ ಕೃಷಿ ಹಾಗು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಲಹೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ತೋಟಗಾರಿಕಾ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ತಹಸೀಲ್ದಾರ ಅವರಿಗೆ ವರದಿ ನೀಡಲು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆ ಮತ್ತು ಕುಡಿಯುವ ನೀರಿನ ಸೌಕರ್ಯ ಹಾಗೂ ಲಸಿಕಾ ಕಾರ್ಯಕ್ರಮಗಳ ಬಗ್ಗೆ ಕ್ರಮ ವಹಿಸಲು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಕೆಲವು ಸಲಹೆಗಳನ್ನು ನೀಡಿದರು.
ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು: ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 907.15 ಕ್ವಿಂಟಲ್ ಮೆಕ್ಕೆಜೋಳ, 236.56 ಕ್ವಿ ಸಜ್ಜೆ, 7.36 ಕ್ವಿ ನವೆಣೆ, 212.74 ಕ್ವಿ ತೊಗರಿ, 64.48 ಕ್ವಿ ಹೆಸರು, 59.57 ಕ್ವಿ ಸೂರ್ಯಕಾಂತಿ ಸೇರಿ ಒಟ್ಟು 1487.86 ಕ್ವಿಂಟಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಅದರಂತೆ 24,480 ಮೆಟ್ರಿಕ್ ಟನ್ ಯೂರಿಯಾ, 12,537 ಮೆ.ಟನ್ ಡಿಎಪಿ, 302 ಮೆ.ಟನ್ ಎಂಓಪಿ, 25,520 ಮೆ.ಟನ್ ಎನ್‌ಪಿಕೆಎಸ್, 433 ಮೆ.ಟನ್ ಎಸ್‌ಎಸ್‌ಪಿ ಸೇರಿ ಜಿಲ್ಲೆಯಲ್ಲಿ ಒಟ್ಟು 63,271 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿಕರಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಗಳಾದ ಮೆಕ್ಕೆಜೋಳ, ಸಜ್ಜೆ, ಭತ್ತ, ತೊಗರಿ, ಸೂರ್ಯಕಾಂತಿ ಬೆಳೆಗಳ ಬಿತ್ತನೆ ಬೀಜ ವಿತರಣೆಯನ್ನು 20 ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 7 ಕೇಂದ್ರಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಜನವರಿ 1ರಿಂದ ಜೂನ್ 4ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 75.0 ಮಿಮಿ ಇದ್ದು ವಾಸ್ತವವಾಗಿ 68.0 ಮಳೆ ಸುರಿದು ಶೇ.9ರಷ್ಟು ಮಳೆಕೊರತೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 85.4 ಮಿಮಿ ಇದ್ದು ವಾಸ್ತವಿಕವಾಗಿ 55.6 ಮಿಮಿ ಸುರಿದು ಶೇ.35 ಮಳೆ ಕೊರತೆಯಾಗಿದೆ. ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 92.2 ಮಿಮಿ ಇದ್ದು ವಾಸ್ತವಿಕವಾಗಿ 78.1 ಮಿಮಿ ಮಳೆ ಸುರಿದು ಶೇ.15ರಷ್ಟು ಮಳೆ ಕೊರತೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 97.1 ಮಿಮಿ ಇದ್ದು ವಾಸ್ತವಿಕವಾಗಿ 76.0 ಸುರಿದು ಶೇ.22ರಷ್ಟು ಮಳೆ ಕೊರತೆಯಾಗಿದೆ. ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 80.09 ಮಿಮಿ ಇದ್ದು ವಾಸ್ತವಿಕವಾಗಿ 62.01 ಮಿಮಿ ಮಳೆ ಸುರಿದು ಶೇ.23ರಷ್ಟು ಮಳೆ ಕೊರತೆಯಾಗಿದೆ. ಕುಕನೂರ ತಾಲೂಕಿನಲ್ಲಿ 133.7 ಮಿಮಿ ಮಳೆ ಸುರಿದು ವಾಸ್ತವಿಕವಾಗಿ 87.9ರಷ್ಟು ಮಳೆ ಸುರಿದು ಸೇ.34ರಷ್ಟು ಮಳೆ ಕೊರತೆಯಾಗಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 60 ಮಿಮಿ ಇದ್ದು ವಾಸ್ತವಿಕವಾಗಿ 53.0 ಮಿಮಿ ಸುರಿದು ಶೇ.14ರಷ್ಟು ಮಳೆ ಕೊರತೆಯಾಗಿದೆ. ಇಡಿ ಜಿಲ್ಲೆಯಾದ್ಯಂತ ವಾಡಿಕೆ ಮಳೆ 93.1 ಮಿಮಿ ಇದ್ದು ವಾಸ್ತವಿಕವಾಗಿ 69.1 ಮಿಮೀ ಸುರಿದು ಶೇ.26 ಮಳೆ ಕೊರತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here